ರಾಯಚೂರು: ವಿಶ್ವವಿದ್ಯಾಲಯಗಳಲ್ಲಿ ಪರಿಸರ ಸ್ನೇಹಿ ವಾತಾವರಣದೊಂದಿಗೆ ಉನ್ನತ ಶಿಕ್ಷಣ ನೀಡುವುದು ಮುಖ್ಯವಾಗಿದ್ದು, ಗುರುಕುಲ ಶಿಕ್ಷಣ ವ್ಯವಸ್ಥೆ ಮನುಷ್ಯನಿಗೆ ಜವಾಬ್ದಾರಿಯುತ ಜೀವನ ನಡೆಸಲು ಬಹುಶಿಸ್ತಿನ ಜ್ಞಾನವನ್ನು ತಂದು ಕೊಡುತ್ತದೆ ಎಂದು ಗುಲ್ಬರ್ಗ ವಿವಿ ಕುಲಪತಿ ಪ್ರೊ.ದಯಾನಂದ ಅಗಸರ ಹೇಳಿದರು.
ಸ್ಥಳೀಯ ರಾಯಚೂರು ವಿವಿ ವಿಜ್ಞಾನ ವಿಭಾಗದಿಂದ ಎರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಗೌರವಯುತ ಬದುಕು ನೀಡಬೇಕಾದರೆ ಬಹುಶಿಸ್ತಿನ ಶಿಕ್ಷಣ ಅವಶ್ಯವಾಗಿದೆ. ವಿದೇಶಗಳಲ್ಲಿ ಶಿಕ್ಷಣದ ವ್ಯಾಪಾರೀಕರಣವಾಗಿದೆ. ಆದರೆ ನಮ್ಮ ದೇಶದಲ್ಲಿ ಶಿಕ್ಷಣ ಸೇವೆ ರೂಪದಲ್ಲಿದೆ ಎಂದರು.
ಗುಲ್ಬರ್ಗ ವಿವಿ ವಿಶ್ರಾಂತ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ ಮಾತನಾಡಿ, ಇರುವ ಜ್ಞಾನದ ಜತೆಗೆ ಹೊಸ ಜ್ಞಾನವನ್ನು ಸೃಷ್ಟಿಸಿಕೊಳ್ಳಬೇಕು. ವ್ಯಕ್ತಿಗತ ಗೌರವದ ಜತೆಗೆ ಆತ್ಮವಿಶ್ವಾಸ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. ವಿಕಸಿತ ಭಾರತಕ್ಕಾಗಿ ಭಾರತೀಯ ತಂತ್ರಜ್ಞಾನ ಅಭಿವೃದ್ಧಿಯೂ ಅತ್ಯಂತ ಪ್ರಾಮುಖ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಮಾತನಾಡಿ, ಸಂಶೋಧನೆ ದೇಶದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ರಾಷ್ಟ್ರ ಮತ್ತು ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು ಸಂಶೋಧನಾ ಲಿತಾಂಶವನ್ನು ವಿಮರ್ಶಾತ್ಮಕವಾಗಿ ಚರ್ಚಿಸಬೇಕು.
ಕೇವಲ ಒಂದು ವಿಷಯದ ಜ್ಞಾನದಿಂದ ಅಧ್ಯಯನದ ಕೊರತೆ ತುಂಬಲು ಸಾಧ್ಯವಿಲ್ಲ. ಹೀಗಾಗಿ ಸಂಶೋಧನೆಯಲ್ಲಿ ಬಹುಶಿಸ್ತೀಯ ಅಧ್ಯಯನದ ಅವಶ್ಯಕತೆಯಿದ್ದು, ಹೀಗಾಗಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಒತ್ತು ನೀಡುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ವಿವಿ ಕುಲಸಚಿವ ಪ್ರೊ.ಎಂ.ವಿಶ್ವನಾಥ, ವೌಲ್ಯಮಾಪನ ಕುಲಸಚಿವ ಪ್ರೊ.ಯರ‌್ರಿಸ್ವಾಮಿ, ಉಪ ಕುಲಸಚಿವ ಡಾ.ಜಿ.ಎಸ್.ಬಿರಾದರ, ಧಾರವಾಡ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್‌ಕೆ.ಸೈದಾಪುರ, ಮೈಸೂರು ವಿವಿ ಜೆನಿಟಿಕ್ಸ್ ವಿಭಾಗದ ಪ್ರೊ.ಎನ್.ಆರ್.ರಾಮಚಂದ್ರ, ವಿಜ್ಞಾನಿ ಡಾ.ಬಿ.ಎಸ್.ಶಶಿಧರ, ಪ್ರಾಧ್ಯಾಪಕಿ ಪ್ರೊ.ಸಿ.ಎಸ್.ಪಾರ್ವತಿ ಉಪಸ್ಥಿತರಿದ್ದರು.