ಬಾಗೇಪಲ್ಲಿ: ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ರೂಢಿಸಿಕೊಂಡು, ಛಲ ಬಿಡದೆ ತಾಳ್ಮೆಯಿಂದ ಗುರಿ ಸಾಧನೆಗೆ ನಿರಂತರವಾದ ಪರಿಶ್ರಮ ಪಟ್ಟಾಗ ಉಜ್ವಲ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ತಾಲೂಕಿನ ಗೂಳೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಯ ಬದುಕಿಗೆ ಉತ್ತಮ ಮೌಲ್ಯ ಮತ್ತು ಶಿಸ್ತನ್ನು ಕಲಿಸಲಾಗುತ್ತದೆ. ನಾನು ಕೂಡ ಇದೇ ಗೂಳೂರು ಶಾಲೆಯ ಹಳೆ ವಿದ್ಯಾರ್ಥಿ. ಯಾವುದೇ ಸೌಲಭ್ಯಗಳಿಲ್ಲದ ಸಂದರ್ಭದಲ್ಲಿ ಉತ್ತಮವಾಗಿ ಓದಿ ಎಸ್ಸೆಸ್ಸೆಲ್ಸಿ ಪಾಸಾಗಿದ್ದೇನೆ. ಆದರೆ ಈಗ ಹಲವಾರು ಸೌಲಭ್ಯಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳ ಶಿಕ್ಷಣಕ್ಕಾಗಿ ತಂದೆ-ತಾಯಿಗಳು ಪಡುವ ಕಷ್ಟವನ್ನು ಸದಾ ಸ್ಮರಿಸಬೇಕು. ಶಿಕ್ಷಣವನ್ನು ನಿರ್ಲಕ್ಷಿಸಿದರೆ ಬದುಕೇ ಅಂಧಕಾರದಲ್ಲಿ ಮುಳುಗಿಹೋಗುತ್ತದೆ. ಭಯ, ಭಕ್ತಿ, ಗೌರವ ಇದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಪ್ರತಿಯೊಬ್ಬರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲೇಬೇಕು ಎಂಬ ಉದ್ದೇಶದಿಂದ ಸ್ವಂತ ಖರ್ಚಿನಲ್ಲಿ ಪ್ರೇರಣಾ ಕಾರ್ಯಕ್ರಮ ಆಯೋಜಿಸಿದ್ದೇನೆ. ವಿದ್ಯಾರ್ಥಿಗಳಿಗೆ ಅಗತ್ಯವಾದರೆ ನಿವೃತ್ತ ಶಿಕ್ಷಕರಿಂದ ಪಾಠ ಹೇಳಿಸಿ ಅವರಿಗೆ 3 ತಿಂಗಳ ಸಂಬಳವನ್ನೂ ಕೊಡುತ್ತೇನೆ ಎಂದು ಶಾಸಕರು ತಿಳಿಸಿದರು.
ಪಾಲಕರ ಪಾತ್ರ ಮುಖ್ಯ
ಪಾಲಕರು 3 ತಿಂಗಳ ಕೃಷಿ ಬೆಳೆಗಾಗಿ 100 ವರ್ಷಗಳ ಮಕ್ಕಳ ಭವಿಷ್ಯದ ಬೆಳೆಯನ್ನು ನಿರ್ಲಕ್ಷಿಸಬೇಡಿ. ಮನೆಗಳಲ್ಲಿ ಟಿವಿಗಳನ್ನು ಆಫ್ ಮಾಡಿ, ಮೊಬೈಲ್ ಬಳಸದಿರಿ. ಮಕ್ಕಳ ಶಿಕ್ಷಣದ ಪ್ರಗತಿಯಲ್ಲಿ ಪಾಲಕರ ಪಾತ್ರ ಪ್ರಮುಖವಾಗಿದೆ. ಕ್ಷೇತ್ರದ ಎಸ್ಸೆಸ್ಸೆಲ್ಸಿ ಲಿತಾಂಶ ಶೇ.100ರಷ್ಟು ಬಂದರೆ ಹೆಚ್ಚಿನ ಸಂತೋಷವಾಗುತ್ತದೆ. ಮಕ್ಕಳಲ್ಲಿ ಶಿಸ್ತು ಬೆಳೆಸಿ ಎಂದು ಎಸ್.ಎನ್. ಸುಬ್ಬಾರೆಡ್ಡಿ ಮನವಿ ಮಾಡಿದರು.
ಬಿಇಒ ಎನ್. ವೆಂಕಟೇಶಪ್ಪ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ನಿಟ್ಟಿನಲ್ಲಿ ಶಾಸಕ ಸುಬ್ಬಾರೆಡ್ಡಿ ಅವರು ಸ್ವಂತ ಖರ್ಚಿನಲ್ಲಿ ಪ್ರೇರಣಾ ಕಾರ್ಯಕ್ರಮ ಜಾರಿ ಮಾಡಿದ್ದಾರೆ. ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಂಡು ಉತ್ತಮ ಲಿತಾಂಶ ತರಬೇಕು ಎಂದರು.
ತಹಸೀಲ್ದಾರ್ ಮನೀಷಾ ಎಸ್. ಪತ್ರಿ, ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಮುನಿಕೆಂಪೇಗೌಡ, ಶಿಕ್ಷಣ ಅಧಿಕಾರಿ ಸುಕನ್ಯಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತ ರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್. ರಮೇಶ್‌ಬಾಬು, ಶಿಕ್ಷಣ ಸಮನ್ವಯ ಅಧಿಕಾರಿ ಆರ್. ವೆಂಕಟರಾಮಪ್ಪ, ಮುಖ್ಯ ಶಿಕ್ಷಕರಾದ ಸಿ.ವೆಂಕಟೇಶ್, ಪಿ.ಸುಬ್ರಮಣ್ಯ, ಕೆ.ನಾಗರಾಜ, ಬಾಲರಾಜು, ಪಿಡಿಒ ಕೃಷ್ಣಮೂರ್ತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎನ್. ಶಿವಪ್ಪ ಮತ್ತಿತರರು ಹಾಜರಿದ್ದರು.