ಜಿಲ್ಲೆ

ಶಿಕ್ಷಣ, ಆರೋಗ್ಯ ದೇಶದ ಸಂಪತ್ತು: ನವೀನ್ ಕುಮಾರ್

ಮಡಿಕೇರಿ: ಶಿಕ್ಷಣ ಮತ್ತು ಆರೋಗ್ಯ ದೇಶದ ಸಂಪತ್ತು ಎಂದು ಖ್ಯಾತ ಮಕ್ಕಳ ತಜ್ಞ ಡಾ.ಬಿ.ಸಿ.ನವೀನ್ ಕುಮಾರ್ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ೨೦೨೩-೨೪ನೇ ಸಾಲಿನಲ್ಲಿ ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತೀ ಹೆಚ್ಚು ಫಲಿತಾಂಶ ಬರಲು ಕಾರಣಕರ್ತರಾದ ಕಾಲೇಜಿನ ಉಪನ್ಯಾಸಕರು ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಶಿಕ್ಷಣ ಮತ್ತು ಆರೋಗ್ಯ ದೇಶದ ಸಂಪತ್ತು ಆಗಿದ್ದು, ವಿದ್ಯಾರ್ಥಿಗಳು ಓದಿನ ಜೊತೆಗೆ ದೇಶದ ಅಭಿವೃದ್ಧಿ ಹಾಗೂ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚಿಂತಿಸಬೇಕು. ಸಾಮಾಜಿಕ ಜಾಲತಾಣಗಳು ವಿವಿಧ ಸ್ತರಗಳ ವ್ಯಕ್ತಿತ್ವ, ಪ್ರತಿಭೆ ಮತ್ತು ಸೃಜನ ಶೀಲತೆಯನ್ನು ಸಮಾಜಕ್ಕೆ ತೋರಿಸುತ್ತದೆ. ಇಡೀ ವಿಶ್ವ, ದೇಶದಲ್ಲಿ ಏನಾಗುತ್ತಿದೆ ಎಂಬುವುದರ ಕುರಿತು ಅರಿವು ಮೂಡಿಸುತ್ತದೆ. ಸಾಮಾಜಿಕ ಜಾಲತಾಣವನ್ನು ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಬಳಕೆ ಮಾಡಬೇಕು. ಮನುಷ್ಯ ತನ್ನ ಸ್ವಾತಂತ್ರ್ಯ ಕಳೆದುಕೊಂಡರೆ ಮಾನಸಿಕ ಸಮಸ್ಯೆಗೆ ಒಳಗಾಗುತ್ತಾನೆ. ಆದ್ದರಿಂದ ಸಾಮಾಜಿಕ ಜಾಲತಾಣವನ್ನು ಇತಿಮಿತಿಯೊಳಗೆ ನಮ್ಮ ಏಳಿಗೆಗಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಪ್ರಸ್ತುತ ದಿನಗಳಲ್ಲಿ ಮಾದಕ ವಸ್ತುಗಳು ವಿದ್ಯಾರ್ಥಿಗಳನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದ್ದು, ಯುವ ಸಮಾಜ ಇದರ ಬಗ್ಗೆ ಜಾಗೃತರಾಗಬೇಕು. ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು ಎಂದ ಅವರು, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರಿಂದ ಸಾಮಾಜಿಕ ಬದ್ಧತೆ ಹೆಚ್ಚಾಗುತ್ತದೆ. ಸಮಾಜದಲ್ಲಿ ನಡೆಯುವ ವಿವಿಧ ಚಟುವಟಿಕೆ ಮತ್ತು ಸಮಾಜಕ್ಕೆ ಸ್ಪಂದಿಸುವ ರೀತಿಯ ಅರಿವಾಗುತ್ತದೆ. ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಬೇಕು. ಮತದಾನದ ಮಹತ್ವವನ್ನು ಅರಿಯಬೇಕು, ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತಾಗ ಮಾತ್ರ ದುಶ್ಚಟಗಳಿಂದ ದೂರವಿರಲು ಸಾಧ್ಯವೆಂದು ಅಭಿಪ್ರಯಾಪಟ್ಟರು.

ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸಿರುವುದು ನಮ್ಮ ದೇಶದ ದುರಂತ. ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ವ್ಯಕ್ತಿತ್ವ, ಆದರ್ಶವನ್ನು ಅಳವಡಿಸಿಕೊಳ್ಳುವ ಮೂಲಕ ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಡಾ.ಬಿ.ಸಿ.ನವೀನ್ ಕುಮಾರ್ ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ಜ್ಞಾನಕ್ಕಿಂತ ಸಂಪತ್ತು ಮತ್ತೊಂದಿಲ್ಲ. ಅಜ್ಞಾನವನ್ನು ಜ್ಞಾನವಾಗಿ ಪರಿವರ್ತಿಸಿ ಸಂಪತ್ತನ್ನು ಗಳಿಸುವಂತಾಗಬೇಕು. ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಣ ಮುಗಿದ ನಂತರವು ಓದುವುದನ್ನು ಹವ್ಯಾಸವನ್ನಾಗಿ ಪರಿವರ್ತಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ನಿರಂತರ ಅಭ್ಯಾಸ ಮಾಡಿ ಜವಾಬ್ದಾರಿಯುತ ನಾಯಕರಾಗಿ ವೃತ್ತಿಯಲ್ಲಿ ತೊಡಗಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ ಅವರು, ದೇಶಕ್ಕೆ ಜವಾಬ್ದಾರಿಯುತ ಯುವ ಸಮೂಹವನ್ನು ಕೊಡುಗೆಯಾಗಿ ನೀಡುವುದರಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಎಂಬ ಕೀಳರಿಮೆಯನ್ನು ಬಿಟ್ಟು ನಿರಂತರ ಕಲಿಕೆಯಿಂದ ಸಮಾಜದ ಉನ್ನತ ಪ್ರಜೆಯಾಗಬೇಕು ಮತ್ತು ಮುಂಬರುವ ಯುವ ಸಮೂಹಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಬಾರ ಪ್ರಾಂಶುಪಾಲ ವೆಂಕಟೇಶ್ ಪ್ರಸನ್ನ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಗೌತಮ ಬುದ್ಧರ ಆಶಯಗಳನ್ನು ಮುಂದಿಟ್ಟುಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ದಲಿತ ಸಂಘರ್ಷ ಸಮಿತಿ ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಮತ್ತಷ್ಟು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.

ಬಿಇಒ ಕೃಷ್ಣಪ್ಪ, ದಸಂ ಸಮಿತಿಯ ಕೊಡಗು-ಮೈಸೂರು ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ ಹಾಗೂ ಸಂಚಾಲಕಿ ಪ್ರೇಮ ಕೃಷ್ಣಪ್ಪ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಡಾ.ಮೋಹನ್ ಕುಮಾರ್ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ೨೧ ಉಪನ್ಯಾಸಕರು ಹಾಗೂ ಹೆಚ್ಚು ಅಂಕ ಪಡೆದ ೯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಅತಿಥಿ ಗಣ್ಯರು ಹಾಗೂ ಉಪನ್ಯಾಸಕರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.