ಜಿಲ್ಲೆ

ಮೈಸೂರು ಶಿಕ್ಷಣ ಮೇಳ ಜನವರಿ 28 ರಂದು ಮುಕ್ತಾಯ

ಸದೇಶ್ ಕಾರ್ಮಾಡ್

ಮೈಸೂರು: ಸಿಬಿಎಸ್‌ಇ, ಐಸಿಎಸ್‌ಇ, ರಾಜ್ಯ ಪಠ್ಯಕ್ರಮಗಳ ಖಾಸಗಿ ಶಾಲೆಗಳ ಆಡಳಿತ ಸಂಸ್ಥೆಗಳ ಒಕ್ಕೂಟ(ಸಿಐಎಸ್‌ಪಿಎಂಎಎಂ) ಹಾಗೂ ಚಿರಾಗ್ ಆ್ಯಡ್ಸ್ ಸಂಸ್ಥೆಯ ವತಿಯಿಂದ ಮೂರು ದಿನಗಳ ಕಾಲ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಮೈಸೂರು ಶಿಕ್ಷಣ ಮೇಳ ಭಾನುವಾರ ಮುಕ್ತಾಯಗೊಳ್ಳಲಿದೆ.

ಪ್ರೀಕೆಜಿಯಿಂದ ವಿಶ್ವವಿದ್ಯಾಲಯದವರೆಗಿನ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯು ಒಂದೇ ಸೂರಿನಡಿ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಎರಡು ದಿನಗಳ ಅವಧಿಯಲ್ಲಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಮೇಳಕ್ಕೆ ಶುಕ್ರವಾರ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಅಧ್ಯಕ್ಷ ವಿ.ವೆಂಕಟೇಶ್, ಪದಾಧಿಕಾರಿಗಳಾದ ಎಂ.ಎಲ್.ರವೀಂದ್ರಸ್ವಾಮಿ, ಮೊಹಮ್ಮದ್ ಅಮೀನ್, ಮಂಜುನಾಥ ಶ್ರೀವತ್ಸ, ಕೆ.ಎಸ್.ಸ್ವರೂಪಿಣಿ, ಎಸ್.ರಾಧಕೃಷ್ಣ, ಚಿರಾಗ್ ಆ್ಯಡ್ಸ್‌ನ ವಿವೇಕ್ ಹಾಗೂ ಇತರರು ಪಾಲ್ಗೊಂಡಿದ್ದರು.

ಉಜ್ವಲ ಶೈಕ್ಷಣಿಕ ಮತ್ತು ವೃತ್ತಿಪರ ಭವಿಷ್ಯದತ್ತ ವಿದ್ಯಾರ್ಥಿಗಳನ್ನು ಮಾರ್ಗದರ್ಶನ ಮಾಡಲು ಈ ಮೇಳ ನೆರವಾಗುತ್ತಿದ್ದು, ರಾಜ್ಯಾ ದ್ಯಂತ ಇರುವ ಶಾಲೆ, ಕಾಲೇಜು, ಇಂಜಿನಿಯರಿಂಗ್ ಕಾಲೇಜುಗಳಿಗೆ ಸಂಬಂಧಿಸಿದ ಅಂದಾಜು 60 ಮಳಿಗೆಗಳನ್ನು ತೆರೆಯಲಾಗಿದೆ.ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಶೈಕ್ಷಣಿಕ ಮಾಹಿತಿ, ವಿದ್ಯಾರ್ಥಿ ಯಾವ ಶಾಲೆ, ಕಾಲೇಜು ಸೇರಬೇಕು? ಎಲ್ಲಿ, ಯಾವ ಸೌಲಭ್ಯವಿದೆ? ಎನ್ನುವ ಮಾಹಿತಿ ಇಲ್ಲಿ ಸಿಗುತ್ತಿದೆ. ಅದಕ್ಕಾಗಿ ತಜ್ಞರಿಂದ ಸೂಕ್ತ ಮಾರ್ಗದರ್ಶನವನ್ನು ಆಯಾಯ ಶಿಕ್ಷಣ ಸಂಸ್ಥೆಗಳು ನೀಡುತ್ತಿವೆ. ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಸಂಪೂರ್ಣ ಉಚಿತ ಪ್ರವೇಶವನ್ನು ಕಲ್ಪಿಸಿಕೊಡಲಾಗಿದ್ದು, ಬೆಳಗ್ಗೆ 10 ರಿಂದ ರಾತ್ರಿ 9ರ ಅವಧಿಯಲ್ಲಿ ಭೇಟಿ ನೀಡಬಹುದು.