ಬೆಳಗಾವಿಯ ವಡಗಾವಿ ಸರ್ಕಾರಿ ಪಿಯು ಕಾಲೇಜು ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಡಿಪಿಯು ಕಚೇರಿ. 
ಜಿಲ್ಲೆ

ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಹುಡುಕಿಕೊಡಿ!

ಬೆಳಗಾವಿ: ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ (ಡಿಡಿಪಿಯು) ಕಚೇರಿಯು ವಿದ್ಯಾರ್ಥಿಗಳ ಕೈಗೆ ಸುಲಭವಾಗಿ ಪತ್ತೆಯಾಗುತ್ತಿಲ್ಲ. ಕಚೇರಿ ಹುಡುಕಿಕೊಂಡು ಬಂದವರು ಅಲೆದಾಡುವ ಪರಿಸ್ಥಿತಿ ಎದುರಾಗಿದೆ.

ನಗರದ ಹೃದಯಭಾಗದಲ್ಲಿ ಇರಬೇಕಾದ ಕಚೇರಿ ವಡಗಾವಿಯ ಸರ್ಕಾರಿ ಪಿಯು ಕಾಲೇಜು ಕಟ್ಟಡದಲ್ಲಿ ನೆಲೆಸಿದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಸುಮಾರು 10 ಕಿ.ಮೀ. ದೂರ ಹೋಗಬೇಕು. ಈ ಕಚೇರಿಗೆ ಹೋಗಬೇಕೆಂದರೆ ಕೇಂದ್ರ ಬಸ್ ನಿಲ್ದಾಣದಿಂದ ವಡಗಾವಿ, ಯಳ್ಳೂರು ಗ್ರಾಮದ ಬಸ್‌ಗಳನ್ನು ಹತ್ತಬೇಕು. ಈ ಬಸ್‌ಗಳು ವಡಗಾವಿ ಯಳ್ಳೂರು ಕ್ರಾಸ್‌ನಲ್ಲಿ ಪ್ರಯಾಣಿಕರನ್ನು ಇಳಿಸುತ್ತವೆ. ಇಲ್ಲಿ ಇಳಿದು ಮತ್ತೆ ಡಿಡಿಪಿಯು ಕಚೇರಿ ಹುಡುಕುತ್ತ ಸಾಗಬೇಕು. ಇದು ವಿದ್ಯಾರ್ಥಿಗಳು, ಪಾಲಕರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ. ಹೀಗಾಗಿ ಈ ಕಚೇರಿ ಬೆಳಗಾವಿ ನಗರದ ಹೃದಯಭಾಗದಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಒತ್ತಾಯಗಳು ಕೇಳಿ ಬಂದಿದೆ.

ಸ್ವಂತ ಕಟ್ಟಡವಿಲ್ಲ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 147 ಪಿಯು ಕಾಲೇಜುಗಳಿವೆ. ಇವುಗಳ ನಿರ್ವಹಣೆ ಮಾಡುವ ಡಿಡಿಪಿಯು ಕಚೇರಿಗೇ ಸ್ವಂತ ಕಟ್ಟಡವಿಲ್ಲ. ಆರಂಭದಲ್ಲಿ ಚವಾಟ್ ಗಲ್ಲಿಯ ಸರ್ಕಾರಿ ಶಾಲೆ, ಕ್ಲಬ್ ರಸ್ತೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ನಂತರ ಗೊಂಧಳಿ ಗಲ್ಲಿಯ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರವಾಗಿತ್ತು. ಹಲವು ವರ್ಷಗಳ ಕಾಲ ಸಣ್ಣ ಜಾಗದ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿತ್ತು. ಬಾಡಿಗೆ ಮೊತ್ತ ಹೆಚ್ಚಿದ್ದರಿಂದ ಮತ್ತು ಇಲಾಖೆಯ ವಿವಿಧ ಕಡತಗಳನ್ನು ಇರಿಸಲು ಸೂಕ್ತ ವ್ಯವಸ್ಥೆ ಇಲ್ಲದ್ದರಿಂದ 2022ರ ಮಾರ್ಚ್‌ನಲ್ಲಿ ವಡಗಾವಿಯ ಸರ್ಕಾರಿ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ವಡಗಾವಿಯಲ್ಲಿ ಸುಸಜ್ಜಿತ ಕಟ್ಟಡ, ಉತ್ತಮ ಸೌಕರ್ಯಗಳಿವೆ. ಆದರೆ, ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ದೂರದಲ್ಲಿದೆ. ಅಲ್ಲಿಗೆ ಹೋಗಲು ಬಸ್ ಹಿಡಿದು ಕಚೇರಿ ತಲುಪಬೇಕೆಂದರೆ ಒಂದು ಗಂಟೆ ಸಮಯ ಹಿಡಿಯುತ್ತಿದೆ. ಬಹಳಷ್ಟು ಬಾರಿ ಸಮರ್ಪಕವಾಗಿ ಬಸ್‌ಗಳು ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ವಿವಿಧ ಕೆಲಸಗಳ ನಿಮಿತ್ತ ಕಚೇರಿಗೆ ಬರುವ ಪಿಯು ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ನಗರದ ಹೃದಯಭಾಗದ ಕಟ್ಟಡವೊಂಡದಕ್ಕೆ ಅದನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಪದೇ ಪದೆ ಸ್ಥಳಾಂತರಿಸುವುದನ್ನು ತಪ್ಪಿಸಲು ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಡಬೇಕು. ಪ್ರಥಮ ಹಂತವಾಗಿ ನಿವೇಶನ ಮಂಜೂರುಗೊಳಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ.

ನಗರದಲ್ಲಿ ಕಾರ್ಯನಿರ್ವಹಿಸಲಿ

ಪುತ್ರನ ಪಿಯು ವ್ಯಾಸಂಗ ಪ್ರಮಾಣಪತ್ರ ಪಡೆಯಲು ರಾಯಬಾಗದಿಂದ ಬಂದಿದ್ದೇನೆ. ಬೆಳಗಾವಿ ಬಸ್ ನಿಲ್ದಾಣದಿಂದ ವಡಗಾವಿಯ ಡಿಡಿಪಿಯು ಕಚೇರಿಗೆ ತೆರಳಲು ಮತ್ತೆ ಒಂದು ಗಂಟೆ ಸಮಯಬೇಕು. ಕಚೇರಿ ಹುಡುಕಿಕೊಂಡು ಬರಬೇಕು. ಬೆಳಗಾವಿ ನಗರದಲ್ಲಿ ಕಚೇರಿ ಕಾರ್ಯಾರಂಭ ಮಾಡಿದರೆ ಬಹಳ ಅನುಕೂಲವಾಗುತ್ತದೆ ಎಂದು ಪಾಲಕರೊಬ್ಬರು ಪ್ರತಿಕ್ರಿಯೆ ನೀಡಿದರು.

ವಡಗಾವಿಯ ಪಿಯು ಕಾಲೇಜಿನ ಕಟ್ಟಡದಲ್ಲಿ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಕಟ್ಟಡ ಸುಸಜ್ಜಿತವಾಗಿದೆ. ಕಾರ್ಯನಿರ್ವಹಣೆಗೆ ತೊಂದರೆಯಾಗಿಲ್ಲ. ಆದರೆ, ಬೆಳಗಾವಿ ನಗರದಿಂದ ಕಚೇರಿ ದೂರವಾಗುತ್ತದೆ. ಸಾರ್ವಜನಿಕರಿಗೆ ಕಚೇರಿ ಬೇಗ ಸಿಗುವುದಿಲ್ಲ. ಈ ಸಮಸ್ಯೆ ಬಗ್ಗೆ ಮೇಲಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇವೆ.| ಎಂ.ಎಂ. ಕಾಂಬಳೆ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ