ಸಾಂದರ್ಭಿಕ ಚಿತ್ರ 
ಜಿಲ್ಲೆ

ರಾಜ್ಯದ ಹೈಸ್ಕೂಲ್ ವಿಭಾಗದ 3 ಸ್ಪರ್ಧೆಗಳ ಕೈ ಬಿಟ್ಟ ಶಿಕ್ಷಣ ಇಲಾಖೆ

ಹರೀಶ್ ಮೋಟುಕಾನ
ರಾಜ್ಯದ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳಿಗೆ ನಡೆಯುವ ಕ್ರೀಡಾಕೂಟಗಳಲ್ಲಿ ಈ ಬಾರಿ ತ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಹಾಗೂ ಜಂಪ್ ರೋಪ್ ಕ್ರೀಡಾ ಸ್ಪರ್ಧೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ರದ್ದು ಮಾಡಿದ್ದು, ಈ ಕ್ರಮವು ಪ್ರತಿಭಾವಂತ ವಿದ್ಯಾರ್ಥಿಗಳು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಪೋಷಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಹಲವು ವರ್ಷಗಳಿಂದ ಈ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳ ಕನಸು ಕಂಡಿದ್ದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಇದೀಗ ಅನಿಶ್ಚಿತತೆಯಲ್ಲಿದೆ. ಈ ಕ್ರೀಡೆಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳ ಶಾಲೆಗಳಲ್ಲಿ ಸಮಾನವಾಗಿ ಜನಪ್ರಿಯವಾಗಿದ್ದವು. ಕಡಿಮೆ ವೆಚ್ಚದಲ್ಲಿ, ಸೀಮಿತ ಸೌಲಭ್ಯಗಳಲ್ಲಿಯೇ ಅಭ್ಯಾಸ ನಡೆಸಬಹುದಾದ ಕಾರಣ ಅನೇಕ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಈ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದರು. ಈಗ ಸ್ಪರ್ಧೆಗಳನ್ನೇ ರದ್ದುಪಡಿಸಿರುವುದರಿಂದ ವಿದ್ಯಾರ್ಥಿಗಳ ಆಸಕ್ತಿ ಕುಗ್ಗುವ ಅಪಾಯ ಎದುರಾಗಿದೆ.
ಸ್ಪರ್ಧೆ ರದ್ದು ಮಾಡಲು ಕಾರಣ?
ಸ್ಕೂಲ್ ಗೇಮ್ ಆಫ್ ಫೆಡರೇಶನ್ (ಎಸ್‌ಜಿಎಫ್‌ಐ) ನಲ್ಲಿ ತ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಜಂಪ್ ರೋಪ್ ಸ್ಪರ್ಧೆಗಳು ಇಲ್ಲ ಎನ್ನುವ ಕಾರಣದಿಂದ ಶಿಕ್ಷಣ ಇಲಾಖೆ ರದ್ದು ಮಾಡಿದೆ. ಆದರೆ ಬಹಳಷ್ಟು ಸ್ಪರ್ಧೆಗಳು ಈ ಎಸ್.ಜಿ.ಎಫ್.ಐ. ನಲ್ಲಿ ಇಲ್ಲ. ಅವುಗಳನ್ನು ಯಾಕೆ ರದ್ದು ಮಾಡಿಲ್ಲ ಎನ್ನುವುದು ಪ್ರಶ್ನೆ. ಈ ಬಗ್ಗೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಬಾಲ್ ಬ್ಯಾಡ್ಮಿಂಟ್ ಅಸೋಸಿಯೇಶನ್ ಮತ್ತು ತ್ರೋ ಬಾಲ್ ಸಂಸ್ಥೆ ಪದಾಧಿಕಾರಿಗಳು ಇಲಾಖೆ ಅಧಿಕಾರಿಗಳಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಈ ಕ್ರೀಡೆಯ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟ ಬಳಿಕ ಸೇರ್ಪಡೆ ಮಾಡುವ ಭರವಸೆ ಸಿಕ್ಕಿದೆ ಎಂದು ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಕರ್ನಾಟಕದ ಪ್ರ.ಕಾರ್ಯದರ್ಶಿ ಪ್ರವೀಣ್ ಕೆ. ತಿಳಿಸಿದ್ದಾರೆ.
ಈ ಕ್ರೀಡೆಗಳ ಮಹತ್ವ
ಪ್ರತಿಯೊಂದು ಕ್ರೀಡೆಗೂ ತನ್ನದೇ ಆದ ಮಹತ್ವವಿದೆ. ತ್ರೋಬಾಲ್ ತಂಡದ ಸಮನ್ವಯ, ಕ್ಷಿಪ್ರ ನಿರ್ಧಾರ ಮತ್ತು ದೈಹಿಕ ಸಾಮರ್ಥ್ಯವನ್ನು ಬೆಳೆಸಿದರೆ, ಬಾಲ್ ಬ್ಯಾಡ್ಮಿಂಟನ್ ವೇಗ, ಚುರುಕುತನ ಹಾಗೂ ಏಕಾಗ್ರತೆಯನ್ನು ವೃದ್ಧಿಸುತ್ತದೆ. ಜಂಪ್ ರೋಪ್ ಹೃದಯದ ಆರೋಗ್ಯ, ದೈಹಿಕ ಸಾಮರ್ಥ್ಯ, ಸಮತೋಲನ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುವ ಅತ್ಯುತ್ತಮ ಕ್ರೀಡೆಯಾಗಿದೆ. ಇಂತಹ ಕ್ರೀಡೆಗಳಿಗೆ ಉತ್ತೇಜನ ನೀಡುವ ಬದಲು ಸ್ಪರ್ಧೆಗಳನ್ನು ಕೈಬಿಡುವುದು ಕ್ರೀಡಾಭಿವೃದ್ಧಿಯ ಉದ್ದೇಶಕ್ಕೇ ವಿರುದ್ಧವಾಗಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.
ನಾವು ಪ್ರತಿದಿನ ಅಭ್ಯಾಸ ಮಾಡುತ್ತಿದ್ದೇವೆ. ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸುವ ಕನಸು ಇದೆ. ಸ್ಪರ್ಧೆಗಳೇ ಇಲ್ಲ ಎನ್ನುವ ಸುದ್ದಿ ಕೇಳಿ ನಮ್ಮ ಕನಸು ಭಗ್ನವಾಗಿದೆ. ಆದರೆ ಮತ್ತೆ ಸೇರಿಸುತ್ತಾರೆ ಎನ್ನುವ ಆಶಾವಾದ ಹೊಂದಿದ್ದೇವೆ.
ಚೇತನ್, ಕ್ರೀಡಾಪಟು
ಸಾರ್ವಜನಿಕ ಶಿಕ್ಷಣ ಇಲಾಖೆ ಹೈಸ್ಕೂಲ್ ವಿಭಾಗದ ಕ್ರೀಡಾಕೂಟಗಳಲ್ಲಿ ಕೈ ಬಿಟ್ಟಿರುವ ಮೂರು ಸ್ಪರ್ಧೆಗಳನ್ನು ಮತ್ತೆ ಸೇರ್ಪಡೆಗೊಳಿಸುವಂತೆ ಮಾಡಿದ ಒತ್ತಾಯಕ್ಕೆ ಇಲಾಖೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರದಲ್ಲೇ ಅಧಿಕೃತ ಆದೇಶ ಬರುವ ನಿರೀಕ್ಷೆ ಇದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ಸಿದ್ಧತೆ ಆರಂಭಿಸಿದ್ದಾರೆ.
ತ್ಯಾಗಂ ಹರೇಕಳ
ರಾಜ್ಯ ಕಾರ್ಯದರ್ಶಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ