ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ ಶಾಲಾ ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಾಲಾ ನಿರ್ವಹಣೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿ ನಡೆಸಲಾದ ಸಮೀಕ್ಷೆಯಲ್ಲಿ, ಪುತ್ತೂರು ಮತ್ತು ಕಡಬ ಅವಿಭಜಿತ ತಾಲೂಕಿನಲ್ಲಿ ವೀರಮಂಗಲ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ಯುತ್ತಮ ಶಾಲೆಯಾಗಿ ಪುಷ್ಟಿ ಗೌರವದೊಂದಿಗೆ 1 ಲಕ್ಷ ರೂ. ನಗದು ಬಹುಮಾನ ಪಡೆದುಕೊಂಡಿದೆ. ಪುತ್ತೂರು ಮತ್ತು ಕಡಬ ತಾಲೂಕಿನ ಎಲ್ಲ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಪ್ರೌಢಶಾಲೆಗಳು ಇಲಾಖೆಯ ವಿದ್ಯಾವಾಹಿನಿ ಪೋರ್ಟಲ್‌ನಲ್ಲಿ ಪ್ರಸ್ತಾವನೆ ಸಲ್ಲಿಸಿದ್ದವು. ಆಯಾ ಕ್ಲಸ್ಟರ್‌ನ ಸಿಆರ್‌ಪಿಗಳು ಪರಿಶೀಲನೆ ನಡೆಸಿ ಮುಂದಿನ ಹಂತಕ್ಕೆ ವರದಿ ಮಾಡಿದ್ದರು. ಮೊದಲ ಹಂತದಲ್ಲಿ 3 ಪ್ರೌಢಶಾಲೆಗಳು, 3 ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ 3 ಹಿರಿಯ ಪ್ರಾಥಮಿಕ ಶಾಲೆಗಳು ತಾಲೂಕು ಹಂತದಲ್ಲಿ ಆಯ್ಕೆಯಾಗಿದ್ದವು. ಆಯ್ಕೆಯಾದ ಈ ಎಲ್ಲ 9 ಶಾಲೆಗಳನ್ನು ಸಮನ್ವಯಾಧಿಕಾರಿಗಳು, ಬಿಆರ್‌ಪಿಗಳು ಸೂಕ್ಷ್ಮವಾಗಿ ಪರಿಶೀಲಿಸಿ ವರದಿ ಮಾಡಿದ್ದರು. ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಯನ್ನೊಳಗೊಂಡ ತಂಡ ಭೇಟಿ ನೀಡಿ ಸಮಗ್ರ ಸಮೀಕ್ಷೆ ಕೈಗೊಂಡಿತ್ತು. ಈ ವರದಿ ಆಧಾರದಲ್ಲಿ 3 ಶಾಲೆಗಳು ಜಿಲ್ಲಾ ಹಂತಕ್ಕೆ ಆಯ್ಕೆಯಾಗಿದ್ದವು. ಜಿಲ್ಲಾ ಹಂತಕ್ಕೆ ಆಯ್ಕೆಯಾದ ತಾಲೂಕಿನ ಮೂರು ಶಾಲೆಗಳ ಸಮೀಕ್ಷೆಗಾಗಿ ಜಿಲ್ಲಾ ಉಪನಿರ್ದೇಶಕ(ಆಡಳಿತ) ಮತ್ತು ಜಿಲ್ಲಾ ಉಪನಿರ್ದೇಶಕರ(ಅಭಿವೃದ್ಧಿ) ತಂಡ ಭೇಟಿ ನೀಡಿ ಸಮಗ್ರ ಸಮೀಕ್ಷೆ ಕೈಗೊಂಡಿತ್ತು. ಶಾಲೆಯ ಬೆಳವಣಿಗೆಗೆ ಎಸ್‌ಡಿಎಂಸಿಯ ಕೊಡುಗೆ, ಮಕ್ಕಳ ಶೈಕ್ಷಣಿಕ ಬೆಳವಣಿಗೆ ಮುಖ್ಯಶಿಕ್ಷಕರ ಮತ್ತು ಶಿಕ್ಷಕರ ಕಾರ್ಯಕ್ಷಮತೆ, ಅಡುಗೆ ಸಿಬ್ಬಂದಿ ಕಾರ್ಯ ಚಟುವಟಿಕೆ, ಪಾಲಕರ ಪಾಲ್ಗೊಳ್ಳುವಿಕೆ, ಹಳೇ ವಿದ್ಯಾರ್ಥಿಗಳ ಕೊಡುಗೆ ಮತ್ತು ಪಾಲ್ಗೊಳ್ಳುವಿಕೆ, ಇತರ ಸಂಘ-ಸಂಸ್ಥೆಗಳ ಕೊಡುಗೆಗಳು ಮತ್ತು ಪಾಲ್ಗೊಳ್ಳುವಿಕೆಯ ಕುರಿತು ಪರಿಶೀಲನೆ ನಡೆಸಿ ರಾಜ್ಯ ಹಂತಕ್ಕೆ ವರದಿ ಮಾಡಿದ್ದರು. ಈ ಎಲ್ಲ ಸಮೀಕ್ಷೆಗಳ ಆಧಾರದಲ್ಲಿ ವೀರಮಂಗಲ ಪಿಎಂಶ್ರೀ ಶಾಲೆಯ ನಿರ್ವಹಣೆ ಅತ್ಯುತ್ತಮ ಎಂದು ಪರಿಗಣಿಸಿ ಶಾಲಾ ಶಿಕ್ಷಣ ಇಲಾಖೆ 1 ಲಕ್ಷ ರೂ. ನಗದು ಮತ್ತು ಪುಷ್ಟಿ ಗೌರವ ನೀಡಿ ಅಭಿನಂದಿಸಿದೆ. ಶಾಲೆಗೆ ಲಭಿಸಿರುವ ಪ್ರಶಸ್ತಿ ಇಲ್ಲಿನ ಶಿಕ್ಷಕರಿಗೆ, ಪಾಲಕರಿಗೆ ಮತ್ತು ಮಕ್ಕಳಿಗೆ ಅರ್ಪಣೆಯಾಗಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ ಪ್ರತಿಕ್ರಿಯಿಸಿದ್ದಾರೆ. ಎಸ್‌ಡಿಎಂಸಿ ಸಾಧನೆ ಪ್ರಶಂಸನೀಯ ಎಂದು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ವೀರಮಂಗಲ, ಊರವರ ಸಹಕಾರದಲ್ಲಿ ಶಾಲೆಗೊಂದು ಸಭಾಮಂದಿರ ನಿರ್ಮಿಸಲು ಸಾಧ್ಯವಾಗಿದೆ. ಶ್ರಮಕ್ಕೆ ಇದೀಗ ಗೌರವ ಸಿಕ್ಕಿದೆ ಎಂದು ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅರ್ಹವಾಗಿ ಲಭಿಸಿದ ಗೌರವ ವೀರಮಂಗಲದ ಪಿಎಂಶ್ರೀ ಶಾಲೆಗೆ ಅರ್ಹವಾಗಿಯೇ ಪುಷ್ಟಿ ಗೌರವ ದೊರಕಿದೆ. ಶಾಲೆ ಅವಿಭಜಿತ ಪುತ್ತೂರು ತಾಲೂಕಿನ ಅತ್ಯುತ್ತಮ ಎಸ್‌ಡಿಎಂಸಿ ಹಾಗೂ ಉತ್ತಮ ಶಾಲೆಯಾಗಿ ಮೂಡಿಬಂದಿದೆ. ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಂಡು ಬಂದಿರುವ ಶಾಲೆಯಲ್ಲಿ ಇಲಾಖೆಯ ಕೆಲಸ ಕಾರ್ಯಗಳ ಮತ್ತು ಎಸ್‌ಡಿಎಂಸಿ ನಿರ್ವಹಣೆ ಅತ್ಯುತ್ತಮವಾಗಿದೆ.ಮುಖ್ಯಶಿಕ್ಷಕರ ಕಾರ್ಯಕ್ಷಮತೆ, ಶಿಕ್ಷಕರ ಬದ್ಧತೆ, ಮಕ್ಕಳ ಭಾಗವಹಿಸುವಿಕೆ ಹೆಮ್ಮೆ ತಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಪ್ರತಿಕ್ರಿಯಿಸಿದ್ದಾರೆ.
ಶಾಲೆ ನಿರಂತರವಾಗಿ ಅಭಿವೃದ್ಧಿ ಹೊಂದಲು ಇಲಾಖಾಧಿಕಾರಿಗಳ, ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಮತ್ತು ಪಾಲಕರು ಹಾಗೂ ಮಕ್ಕಳ ಕೊಡುಗೆ ಅನನ್ಯ. ಈ ಪ್ರೋತ್ಸಾಹ ಮಕ್ಕಳಿಗೆ ಶಿಶುಸ್ನೇಹಿಯಾಗಿ, ಪರಿಸರಸ್ನೇಹಿಯಾಗಿ ಕಾರ್ಯನಿರ್ವಹಿಸಲು ನಮಗೆ ಉತ್ತೇಜನ ನೀಡಿದೆ. ಈ ಗೌರವದಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ. ತಾರಾನಾಥ ಸವಣೂರು, ಶಾಲಾ ಮುಖ್ಯಶಿಕ್ಷಕ