ಕುಕನೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿ ಸಂಖ್ಯೆ ಹೆಚ್ಚಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್, ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿತ್ತು.
ರಾಜ್ಯ ಸರ್ಕಾರ ಕಕ ಭಾಗದಲ್ಲಿ 5200 ಶಿಕ್ಷಕರ ಹುದ್ದೆ ನೇಮಕಾತಿ ಮಾಡುತ್ತಿದ್ದು, ಇದನ್ನು ಹತ್ತು ಸಾವಿರಕ್ಕೆ ಏರಿಸಬೇಕು. 5200ರಲ್ಲಿ 4424 ಪ್ರಾಥಮಿಕ ಶಾಲಾ ಶಿಕ್ಷಕರು (1ರಿಂದ5), ಇದರಲ್ಲಿ 78 ಪದವೀಧರ ಶಿಕ್ಷಕರ ಹುದ್ದೆ, 121 ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಆದೇಶ ಹೊರಡಿಸಿದೆ. ಪದವೀಧರ, ಪ್ರಾಥಮಿಕ ಶಿಕ್ಷಕರ ಹುದ್ದೆಯನ್ನು 3000ಕ್ಕೆ ಏರಿಸಬೇಕು. ಇದರಿಂದ ಶಿಕ್ಷಕರ ಕೊರೆತೆ ನಿಗಲಿದೆ ಎಂದು ಒತ್ತಾಯಿಸಿದರು.
ಈ ಭಾಗದಲ್ಲಿ 1.50 ಲಕ್ಷ ವಿದ್ಯಾರ್ಥಿಗಳು ಟಿಇಟಿ ಉತ್ತೀರ್ಣರಾಗಿ ಮೂರು ವರ್ಷಗಳು ಕಳೆದರು ಸರ್ಕಾರ ಕೇವಲ 78 ಪದವೀಧರ ಶಾಲಾ ಶಿಕ್ಷಕರ ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ. ಇದರಲ್ಲಿ ವಿಷಯವಾರು ಹಂಚಿಕೆ ಮಾಡಿದರೆ ಒಂದು ವಿಷಯಕ್ಕೆ 10 ಶಿಕ್ಷಕ ಹುದ್ದೆಗಳು ಬರುತ್ತವೆ. ಶಿಕ್ಷಕರ ನೇಮಕಾತಿ 2022ರಲ್ಲಿ ನಡೆದಿದೆ. ಇಲ್ಲಿಯವರೆಗೂ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಈ ಭಾಗದ ಶೈಕ್ಷಣಿಕ ಪ್ರಗತಿ ಈ ಅಂಶ ಗಮನಿಸಿ ನೇಮಕಾತಿಯಲ್ಲಿ ಪದವೀಧರ ಶಾಲಾ ಶಿಕ್ಷಕರ ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಎಸ್‌ಎಫ್‌ಐ ಸಂಘಟನೆ ರಾಜ್ಯ ಉಪಾಧ್ಯಕ್ಷ ಬಸವರಾಜ, ರಾಜ್ಯ ಕಾರ್ಯದರ್ಶಿ ವಿಜಯಕುಮಾರ, ಶಿಕ್ಷಕ ಆಕಾಂಕ್ಷಿಗಳಾದ ಜಗದೀಶ ಗೌಡ್ರು, ಬಸವರಾಜ ಎಚ್, ಬಸವರಾಜ ಪವಾರ, ನಿಂಗಮ್ಮ, ದೇವಪ್ಪ ರಾಯಚೂರು, ಶರಣು ಸಜ್ಜನ್, ಭೀಮನಗೌಡ ಇತರರಿದ್ದರು.