ಧಾರವಾಡ: ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿರುವ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಜ ಗ್ರಾಮದ ಹಿರಿಯ ಪ್ರಾಥಮಿಕ ಕನ್ನಡ ಸರ್ಕಾರಿ ಶಾಲೆಗೆ ಶಾಲಾ ಶಿಕ್ಷಣ ಇಲಾಖೆ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ಈಚೆಗೆ ಭೇಟಿ ನೀಡಿ ಮೂಲ ಸೌಲಭ್ಯ ಪರಿಶೀಲಿಸಿದರು.
ಸಾರ್ವಜನಿಕರ ದೂರು ಹಾಗೂ ಶಾಲೆಯ ಶಿಥಿಲಗೊಂಡ ಶಾಲೆಯ ಕಟ್ಟಡ ಕುರಿತು ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಆಯುಕ್ತರು ಶಾಲೆಗೆ ತುರ್ತು ಭೇಟಿ ನೀಡಿದರು. ಶಾಲೆಯ ಕೆಲವು ಕೊಠಡಿಗಳು ದುರಸ್ತಿ ಅಂಚಿನಲ್ಲಿರುವುದು ಕಂಡುಬಂತು. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ಕೊಠಡಿಗಳಲ್ಲಿ ಬೋಧನೆ ಮಾಡದಂತೆ ಆದೇಶಿಸಿದರು. ಉಮರಜ ಸರ್ಕಾರಿ ಪ್ರೌಢಶಾಲೆಯ ಕೊಠಡಿಗಳಲ್ಲಿ ನಡೆಸುವಂತೆ ಶಿಕ್ಷಕರಿಗೆ ನಿರ್ದೇಶನ ನೀಡಲು ಬಿಇಒ ಚಿದಾನಂದ ಕಟ್ಟಿಮನಿ ಅವರಿಗೆ ಸೂಚಿಸಿದರು. ಇದೇ ವೇಳೆ ಇಂಡಿ ತಾಲೂಕು ಬಿಇಒ ಕಚೇರಿಗೆ ಭೇಟಿ ನೀಡಿ ಶಾಲಾ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನ, ಸರ್ಕಾರಿ ಶಾಲೆಗಳಲ್ಲಿ ಪರಿಣಾಮಕಾರಿ ಬೋಧನೆ, ಆಡಳಿತಕ್ಕೆ ಸಂಬಂಧಿಸಿದ ಕಡತಗಳ ವಿಲೇವಾರಿಯ ಸಂಗತಿಗಳನ್ನು ವಿವರವಾಗಿ ಪರಿಶೀಲಿಸಿದರು.