ವಿರಾಜಪೇಟೆ : ವಿದ್ಯಾರ್ಥಿ ಜೀವನದ ಸಂದರ್ಭದಲ್ಲಿ ಮಾಡುವ ಅಲ್ಪ ತ್ಯಾಗವು ಮುಂದೆ ದೊಡ್ಡ ಪ್ರತಿಫಲವನ್ನು ನೀಡುತ್ತದೆ ಎಂದು ವಿರಾಜಪೇಟೆಯ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್.ಸಲ್ಡಾನ ಅಭಿಪ್ರಾಯಪಟ್ಟರು.
ಪಟ್ಟಣದ ತೆಲುಗರ ಬೀದಿಯಲ್ಲಿನ ಚಾಣಕ್ಯ ಕೋಚಿಂಗ್ ಸೆಂಟರ್‌ನಲ್ಲಿ ಕಳೆದ ಸಾಲಿನಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಹಳೆಯ ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಣ ವ್ಯಕ್ತಿಯ ಬದುಕು ಬದಲಿಸುತ್ತದೆ. ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರುವ ಮೂಲಕ ತಂದೆ-ತಾಯಿಗೆ ಸಮಾಜದಲ್ಲಿ ಗೌರವ ತರಬೇಕೆಂದರು.
ಉಪನ್ಯಾಸಕಿ ಧರ್ಮಶೀಲಾ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಂತೆ ನಡೆದರೆ ಉತ್ತಮ ಜೀವನವನ್ನು ಕಟ್ಟಿಕೊಳ್ಳಬಹುದು ಎಂದರು. ವಿರಾಜಪೇಟೆಯ ಕಾವೇರಿ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಪಿ.ಎನ್.ವಿನೋದ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದರು.
ಚಾಣಕ್ಯ ಎಜುಕೇಶನ್ ಟ್ರಸ್ಟ್ ಅಧ್ಯಕ್ಷೆ ಸಿ.ಎನ್.ಕವಿತಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉದ್ಯಮಿ ಅಲ್ತಾಫ್ ಜುಕಾಕ್, ಸಂಸ್ಥೆ ಉಪನ್ಯಾಸಕ ಸುಬ್ಬಯ್ಯ, ಪಾರ್ವತಿ ಹಾಗೂ ರಮ್ಯಾ ಮಂಜುನಾಥ್ ಉಪಸ್ಥಿತರಿದ್ದರು.