ಕೊಪ್ಪ: ಸರ್ಕಾರಿ ಶಾಲೆಗಳು ಮಕ್ಕಳ ದಾಖಲಾತಿ ಕೊರತೆಯಿಂದ ಮುಚ್ಚುತ್ತಿರುವುದು ಬೇಸರ ಹಾಗೂ ದುರಾದೃಷ್ಟಕರ ಸಂಗತಿ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಗಡಿಕಲ್ನಲ್ಲಿ ಸೋಮವಾರ ರಾಷ್ಟ್ರಕವಿ ಕುವೆಂಪು ವೇದಿಕೆ, ಆಲೆಮನೆ ಸಣ್ಣಸಿದ್ದಪ್ಪ ನಾಯಕ್ ಸ್ಮಾರಕ ಮಂಟಪದಲ್ಲಿ ಆಯೋಜಿಸಿದ್ದ ಆಲೆಮನೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ ನಾಗಾಲೋಟದಲ್ಲಿ ಬೆಳೆಯುತ್ತಿರುವುದರಿಂದ ಶಿಕ್ಷಣ ಕಲಿಕೆ ಅಗತ್ಯ. ದೇಶ, ವಿದೇಶಗಳಲ್ಲಿ ಗಮನ ಸೆಳೆಯುವ ಸ್ಥಳ ಹಿರೇಕೊಡಿಗೆ. ಕುವೆಂಪು ಬರೆದ ನಾಡಗೀತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ದೇಶ ವಿಶ್ವದಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ ಎಂದರು.
ಭದ್ರಾಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಇದು ಹೃದಯ ಸ್ಪರ್ಶಿ ಕಾರ್ಯಕ್ರಮ. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಕೆಲಸವಾಗಬೇಕು. ಪಾಲಕರು, ಶಿಕ್ಷಕರು ಸೇರಿ ನಡೆದಾಗ ಮಾತ್ರ ಮಕ್ಕಳ ಭವಿಷ್ಯಕ್ಕೆ ದಾರಿಯಾಗುತ್ತದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಪ್ರತಿಭೆ ಇರುತ್ತದೆ ಅದನ್ನು ಗುರುತಿಸುವ ಕೆಲಸ ಶಿಕ್ಷಣದಿಂದ ಆಗಬೇಕು. ಮಲೆನಾಡಿನ ಭಾಗಕ್ಕೆ ವಿದ್ಯೆ, ಪ್ರತಿಭೆಯಿಂದ ಮಾತ್ರ ಭವಿಷ್ಯವಿದೆ ಎಂದರು.
ಹಿರೇಕೊಡಿಗೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ, ಶಾಲಾ ಶತಮಾನೋತ್ಸವ ಆಚರಣೆ ಸಮಿತಿ ಕಾರ್ಯದರ್ಶಿ ಎಚ್. ಎಸ್.ರಮೇಶ್, ಖಜಾಂಚಿ ಶಂಕರನಾರಾಯಣ ಉಡುಪ, ಸಹ ಕಾರ್ಯದರ್ಶಿ ಮಂಜುನಾಥ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗುರುಮೂರ್ತಿ, ಉಪಾಧ್ಯಕ್ಷೆ ಅಂಬಿಕಾ, ಹಿರೇಕೊಡಿಗೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ಸದಸ್ಯರಾದ ಧನ್ಯ, ವಿಶ್ವ, ರವೀಂದ್ರ, ರಾಜೀವಿ, ದೇವಂಗಿ ಗ್ರಾಪಂ ಸದಸ್ಯರಾದ ನಾಗರಾಜ್, ಸರೋಜ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್.ಎಂ.ರವಿಕಾಂತ್, ಕಾರ್ಯದರ್ಶಿ ಎಚ್.ಕೆ.ವಿಶ್ವ, ಮುಖ್ಯಶಿಕ್ಷಕಿ ಮಂಜುಳಾ ದೇವಿ, ಶಿಕ್ಷಣ ಇಲಾಖೆಯ ಶೇಖರಪ್ಪ, ಆರ್.ಡಿ.ರವೀಂದ್ರ, ಪಿಡಿಒ ಪದ್ಮಲತಾ ಮತ್ತಿತರರು ಇದ್ದರು.