ಯಲಬುರ್ಗಾ: ಪ್ರತಿಯೊಬ್ಬರೂ ಶಿಕ್ಷಣ ಪಡೆದು ವಿದ್ಯಾವಂತರಾದರೆ ಏನಾದರೂ ಸಾಧನೆ ಮಾಡಬಹುದು ಎಂದು ಕಲಾವಿದ ಕಾಳೇಶ ಕಮ್ಮಾರ ಹೇಳಿದರು.
ತಾಲೂಕಿನ ಮುರಡಿ ಗ್ರಾಪಂನಲ್ಲಿ ಜಿಪಂ, ಜಿಲ್ಲಾ ಸಾಕ್ಷರತಾ ಶಿಕ್ಷಣ ಇಲಾಖೆ ಹಾಗೂ ಕುಷ್ಟಗಿಯ ಜನಜಾಗೃತಿ ಕಲಾರಂಗದ ಸಹಯೋಗದಲ್ಲಿ ಸಾಕ್ಷರತಾ ಪರೀಕ್ಷೆ ಕಾರ್ಯಕ್ರಮದಡಿ ಈಚೆಗೆ ಹಮ್ಮಿಕೊಂಡಿದ್ದ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಸಾಧನೆ ಸಾಧ್ಯ. ಕಲಿಕೆಯಿಂದ ದೂರ ಉಳಿದವರು ಸಾಕ್ಷರತಾ ಪರೀಕ್ಷೆಯ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು. ಸಾಕ್ಷರತಾ ಶಿಕ್ಷಣ ಇಲಾಖೆ,
ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಿಂದ ತಾಲೂಕಿನ ಮುರುಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದಾಖಲಾಗಿರುವ ಕಲಿಕೆಯನ್ನು ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಆ.6ರಂದು ಸಾಕ್ಷರತಾ ಪರೀಕ್ಷೆ ನಡೆಯಲಿದೆ.
ಕಲಿಕೆಗೆ ದಾಖಲಾದ ಎಲ್ಲರೂ ಪರೀಕ್ಷೆಗೆ ನೋಂದಾಯಿಸಿಕೊಳ್ಳಬೇಕು ಎಂದರು. ಕಲಾತಂಡದ ಮುಖಂಡ ಚಂದ್ರಶೇಖರಗೌಡ ಮಾಲಿಪಾಟೀಲ್, ಸದಸ್ಯರಾದ ಸಂಗಮೇಶ ದಫೇದ್, ಮಂಜುನಾಥ ದಳವಾಯಿ ಇದ್ದರು.