ಜಿಲ್ಲೆ

ಶಿಕ್ಷಣದಿಂದಲೇ ಸಾಧನೆ ಸಾಧ್ಯ

ಮಾನ್ವಿ: ಶಿಕ್ಷಣದಿಂದ ವಿದ್ಯಾರ್ಥಿಗಳ ಉತ್ತಮ ಜೀವನ ರೂಪಿಸುವುದರೊಂದಿಗೆ ಸತ್ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಹಂಪಯ್ಯನಾಯಕ ಹೇಳಿದರು.

ಪಟ್ಟಣದ ಈದ್ಗಾ ಫಂಕ್ಷನ್ ಹಾಲ್‌ನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಮತ್ತು ತಾಲೂಕು ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಶನಿವಾರ ಮಾತನಾಡಿದರು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದ್ದು, ಶಿಕ್ಷಣ ಇಲ್ಲದಿದ್ದರೆ ಏನನ್ನೂ ಸಾಧಿಸಲು ಆಗುವುದಿಲ್ಲ. ಹೀಗಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಕರು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಲಿ ಎನ್ನುವ ನಿಟ್ಟಿನಲ್ಲಿ ನಾನು ಮತ್ತು ಸಚಿವ ಎನ್‌ಎಸ್ ಬೋಸರಾಜು 4 ಜನ ಉತ್ತಮ ಶಿಕ್ಷಕರಿಗೆ ಬಂಗಾರದ ಪದಕ ನೀಡಿ ಗೌರವಿಸುತ್ತಿದ್ದೇವೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಮಾತನಾಡಿ, ತಾಲೂಕಿನ ಶಿಕ್ಷಕರ ಪರಿಶ್ರಮದಿಂದ ಶಿಕ್ಷಣದ ಗುಣಮಟ್ಟ ಹೆಚ್ಚಾಳವಾಗಿದೆ. ಈ ಮೂಲಕ ತಾಲೂಕಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಿದೆ ಎಂದರು. ಉಪನ್ಯಾಸಕ ಡಾ.ಬಸವರಾಜ ಕರಡಿಗುಡ್ಡ ಉಪನ್ಯಾಸ ನೀಡಿದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಲೀಂ ಪಾಷಾ, ಟಿಎಪಿಸಿಎಂಎಸ್ ಅಧ್ಯಕ್ಷ ತಿಮ್ಮರೆಡ್ಡಿ ಭೋಗಾವತಿ, ಮುಖಂಡ ಬಾಲಸ್ವಾಮಿ ಕೊಡ್ಲಿ, ಮಹಮ್ಮದ್ ಯೂನಿಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ ನಾಯಕ, ಮಹೇಶ, ಸಬ್ಜಲಿ, ಮೂಕಪ್ಪ ಕಟ್ಟಿಮನಿ, ಮೆಹಬೂಬ್ ಪಾಷಾ ಇತರರು ಇದ್ದರು.