ಚಿತ್ರದುರ್ಗ: ಚಿಕ್ಕ ಮಕ್ಕಳಲ್ಲಿರುವ ಅಸಾಮಾನ್ಯ ಪ್ರತಿಭೆ ಗುರುತಿಸಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಎಸ್‌ಜೆಎಸ್ ಸಮೂಹ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಗುರುಪೂರ್ಣಿಮೆ ಪ್ರಯುಕ್ತ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕೆಲ ಮಕ್ಕಳ ಬುದ್ದಿಮತ್ತೆ ವಿಶೇಷವಾಗಿರುತ್ತದೆ. ವಯಸ್ಸಿಗೂ ಮೀರಿದ ಜ್ಞಾನ, ಬುದ್ದಿವಂತಿಕೆಯಿಂದ ಅವರು ಜಗತ್ತಿನ ಗಮನ ಸೆಳೆಯುತ್ತಾರೆ. ವಿಶೇಷವಾದದ್ದನ್ನು ಸಾಧಿಸುತ್ತಾರೆ.
ಅಕ್ಷರ ಎಂದರೆ ನಾಶವಿಲ್ಲದಿರುವುದು ಎಂದರ್ಥ. ಮಕ್ಕಳಲ್ಲಿ ಶಿಕ್ಷಣದ ಬಗೆಗೆ ಪ್ರೀತಿ ಬೆಳೆಸುವುದು ಮೊದಲ ಆದ್ಯತೆಯಾಗಬೇಕು. ಪ್ರತಿ ಮಗುವಿಗೆ ಅನ್ನ, ಅಕ್ಷರ, ಆರೋಗ್ಯ ಅತ್ಯವಶ್ಯಕ. ಏನೇ ಜಂಜಾಟವಿದ್ದರೂ ಪಾಲಕರು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಎಂದರು.
ಶ್ರೀಗಳು ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದರು. ಶಾಲೆ ಮುಖ್ಯ ಶಿಕ್ಷಕ, ಶಿಕ್ಷಕರು,ಶಿಕ್ಷಕೇತರ ಸಿಬ್ಬಂದಿ ಹಾಜರಿದ್ದರು.