ಆರ್.ಕೃಷ್ಣ ಮೈಸೂರು
ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದನೆ ಮಾಡಬಹುದು ಎನ್ನುವ ಆಮಿಷಕ್ಕೆ ಒಳಗಾಗಿ ಉನ್ನತ ಹುದ್ದೆಯಲ್ಲಿರುವ ವಿದ್ಯಾವಂತರೇ ಹಣ ಕಳೆದುಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬರುವ ಲಿಂಕ್‌ಗಳಿಂದ, ಷೇರು ಮಾರುಕಟ್ಟೆ ಹೆಸರಲ್ಲಿ ಲಕ್ಷಾಂತರ ರೂ. ಕಳೆದುಕೊಳ್ಳುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸರ್ಕಾರ, ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಇಂತಹ ನಕಲಿ ಕಂಪನಿಗಳ ವಂಚನೆ ಜಾಲಕ್ಕೆ ಸುಶಿಕ್ಷಿತರೇ ಹೆಚ್ಚು ಬೀಳುತ್ತಿರುವುದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ.
ಇಂತಹ ವಂಚಕರ ಜಾಲದಿಂದಾಗಿ ತಾವು ಜೀವನವಿಡೀ ಸಂಪಾದಿಸಿ ಕೂಡಿಟ್ಟಿದ್ದ ಹಣವನ್ನು ಒಮ್ಮೆಲೇ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಇಂಜಿನಿಯರ್ ಒಬ್ಬರು ನಿವೃತ್ತಿ ನಂತರ ಬಂದ ಹಣವನ್ನು ಬ್ಯಾಂಕ್‌ನಲ್ಲಿ ಇಟ್ಟು ಅದರಿಂದ ಬರುವ ಬಡ್ಡಿಯಿಂದ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಆದರೆ ಹಣ ದುಪ್ಪಟ್ಟು ಮಾಡುವ ಉದ್ದೇಶದಿಂದ ಆನ್‌ಲೈನ್ ಟ್ರೇಡಿಂಗ್‌ಗೆ ಕೈ ಹಾಕಿದ್ದರಿಂದ ಸುಮಾರು 1.25 ಕೋಟಿ ರೂ. ಕಳೆದುಕೊಂಡರು.
ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಹಣ ಕ್ಷಣಾರ್ಧದಲ್ಲಿ ದುಪ್ಪಟ್ಟಾಗುತ್ತದೆ ಎಂದು ನಕಲಿ ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಮಾಡುವವರಲ್ಲಿ ಸರ್ಕಾರಿ ಅಧಿಕಾರಿಗಳು, ಟೆಕ್ಕಿಗಳು, ಉದ್ಯಮಿಗಳು ಹಾಗೂ ಮಹಿಳೆಯರೇ ಹೆಚ್ಚಾಗಿದ್ದಾರೆ.
ಜ್ಞಾನದ ಕೊರತೆ ಕಾರಣ: ಷೇರು ಮಾರುಕಟ್ಟೆಯಲ್ಲಿ ಹೇಗೆ ಬಂಡವಾಳ ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಸರಿಯಾದ ಜ್ಞಾನವಿಲ್ಲದೆ ಹಣ ಕಳೆದುಕೊಳ್ಳುತ್ತಿರುವವರೇ ಹೆಚ್ಚಿದ್ದಾರೆ.
ಮೊಬೈಲ್‌ನ ಇನ್‌ಸ್ಟಾಗ್ರಾಂನಲ್ಲಿ ಬಂದ ಜಾಹೀರಾತನ್ನು ಕ್ಲಿಕ್ ಮಾಡಿದರೆ ನಾನಾ ಗ್ರೂಪ್‌ಗಳಿಗೆ ಲಿಂಕ್ ಹೋಗುತ್ತದೆ. ಆ ಲಿಂಕ್‌ಗಳಲ್ಲಿ ಗ್ರೂಪ್‌ಗಳಿಗೆ ಸಂಪರ್ಕ ಕಲ್ಪಿಸಿ ಹಣ ಹೂಡಿಕೆ ಮಾಡಿದರೆ ಹಣ ಗಳಿಸಬಹುದು ಎನ್ನುವ ಆಮಿಷ ಇರುತ್ತದೆ.
ಮೊದಲಿಗೆ ಖಾತೆಯಲ್ಲಿ ಲಾಭಾಂಶ ತೋರಿಸಲಾಗುತ್ತದೆ. ಇದರಿಂದ ಉತ್ತೇಜಿತರಾದ ನಂತರ ಹೆಚ್ಚು ಹೆಚ್ಚು ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ. ಇದನ್ನು ನಂಬಿ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಅಲ್ಲಿಗೆ ವಂಚಕರ ಜಾಲಕ್ಕೆ ಬಿದ್ದಂತೆ.
ಆನ್‌ಲೈನ್ ವಂಚನೆಯಿಂದ ಹಣ ಕಳೆದುಕೊಂಡರೆ ಹಣ ಮತ್ತೆ ವಾಪಸ್ ಬರುವುದಿಲ್ಲ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಎಂದುಕೊಂಡು ತಿಂಗಳಾನುಗಟ್ಟಲೇ ಸುಮ್ಮನಿರುವ ಗ್ರಾಹಕರು, ವಾಪಸ್ ಹಣ ಬಾರದೇ ಇದ್ದಾಗ ತಾವು ವಂಚನಗೊಳಗಾಗಿದ್ದೇವೆ ಎನ್ನುವುದು ಅರಿವಿಗೆ ಬರುತ್ತದೆ.
ಹಣ ವಾಪಸ್ ಪಡೆಯಲು ಹೋದರೆ ಅಷ್ಟರಲ್ಲಿ ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆಗಳಿಂದ ಹಣ ಡ್ರಾ ಮಾಡಿ ಹತ್ತಕ್ಕೂ ಹೆಚ್ಚು ಕೈ ಬದಲಾಗಿ ಸೈಬರ್ ಖದೀಮರ ಕೈ ಸೇರಿರುತ್ತದೆ.
ಜನರಲ್ಲಿ ಜಾಗೃತಿ ಅಗತ್ಯ:
ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮಾಡುವ ಸಂಬಂಧ ವಂಚಕರು ಸಾಮಾಜಿಕ ಜಾಲತಾಣಗಳಾದ ೇಸ್‌ಬುಕ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸುತ್ತಾರೆ.
ಸಂದೇಶದಿಂದ ಆಸಕ್ತರು ಮುಂದೆ ಬಂದರೆ ಅವರನ್ನು ಪ್ರತ್ಯೇಕವಾಗಿ ಗ್ರೂಪ್‌ಗೆ ಸೇರಿಸಿಕೊಂಡು ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಲಾಭವಾಗಲಿದೆ ಎಂದು ನಂಬಿಸುತ್ತಾರೆ. ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಕೊಂಡ ಮೇಲೆ ಹಣ ವಾಪಸ್ ವರ್ಗಾವಣೆ ಮಾಡದೆ ವಂಚಿಸುತ್ತಾರೆ.
ಸಾಮಾಜಿಕ ಜಾಲತಾಣಗಳಿಂದ ಬರುವ ಸಂದೇಶಗಳನ್ನು ನಂಬಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಬಾರದು. ಯಾವುದೋ ಬೇರೆ ಖಾತೆಗೆ ಹಣ ವರ್ಗಾವಣೆ ಮಾಡುವ ಬದಲು ನಿಮ್ಮ ಡಿಮ್ಯಾಟ್ ಖಾತೆಯಿಂದ ನೇರವಾಗಿ ಹಣ ಹೂಡಿಕೆ ಮಾಡಿದರೆ ಹಣ ಸುರಕ್ಷಿತವಾಗಿರುತ್ತದೆ ಎಂಬುದು ಉದ್ಯಮಿ ಬಿ.ಸಿ.ಷಡಕ್ಷರಿಸ್ವಾಮಿ ಅವರ ಸಲಹೆ.
ವರ್ಷದಿಂದ ವರ್ಷಕ್ಕೆ ಪ್ರಕರಣಗಳು ಏರಿಕೆ
ಆನ್‌ಲೈನ್ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಮೈಸೂರು ನಗರ ವ್ಯಾಪ್ತಿ ಒಂದರಲ್ಲಿಯೇ ಎರಡೂ ಕಾಲು ವರ್ಷದಲ್ಲಿ ಬರೋಬ್ಬರಿ 70 ಕೋಟಿ ರೂ. ವಂಚನೆಯಾಗಿದೆ.
ಇಷ್ಟು ದಿನಗಳ ಕಾಲ ಎಸ್‌ಎಂಎಸ್, ಒಟಿಪಿ ಮತ್ತು ಲಿಂಕ್‌ಗಳ ಮೂಲಕ ಗ್ರಾಹಕರ ಬ್ಯಾಂಕ್ ಖಾತೆಗೆ ಕನ್ನ ಹಾಕಿ ಹಣ ದೋಚುತ್ತಿದ್ದ ಸೈಬರ್ ವಂಚಕರು ಈಗ ಪಾರ್ಟ್‌ಟೈಮ್ ಜಾಬ್, ಆನ್‌ಲೈನ್ ಟ್ರೇಡಿಂಗ್, ಡಿಜಿಟಲ್ ಅರೆಸ್ಟ್, ಷೇರುಪೇಟೆ ಹೂಡಿಕೆಯಂತಹ ಹೊಸ ಬಗೆಯ ವಂಚನೆಯ ತಂತ್ರಗಳ ಮೂಲಕ ಜನರನ್ನು ಮರಳು ಮಾಡಿ ಹಣ ದೋಚುತ್ತಿದ್ದಾರೆ.
ಕಳೆದ 28 ತಿಂಗಳಲ್ಲಿ 500ಕ್ಕೂ ಹೆಚ್ಚು ಪ್ರಕರಣ ಮೈಸೂರು ನಗರದಲ್ಲಿ ದಾಖಲಾಗಿದ್ದು, 70 ಕೋಟಿ ರೂ.ಗಳನ್ನು ಆನ್‌ಲೈನ್ ವಂಚನೆಯಿಂದ ಜನರು ಕಳೆದುಕೊಂಡಿದ್ದಾರೆ. ಕೇವಲ ಮೂರು ತಿಂಗಳಲ್ಲಿ 12 ಕೋಟಿ ರೂ. ಹೋಗಿರುವುದು ವಂಚಕರ ಜಾಲಕ್ಕೆ ಜನ ಬಲಿಯಾಗುತ್ತಿರುವುದಕ್ಕೆ ಸಾಕ್ಷಿ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೂರು ಪಟ್ಟು ವಂಚನೆ ಹೆಚ್ಚಾಗಿದೆ.
ಆನ್‌ಲೈನ್ ವಂಚಕರು ನೆರೆ ರಾಜ್ಯ ಅಥವಾ ವಿದೇಶಗಳಿಂದ ಕರೆ ಮಾಡುವ ಮೂಲಕ ವಂಚನೆ ಮಾಡುತ್ತಿರುವುದರಿಂದ ಅವರ ಪತ್ತೆ ಕಾರ್ಯ ಕಷ್ಟಸಾಧ್ಯವಾಗಿದೆ. ವಂಚಕರ ಜಾಲದಿಂದ ಜನರು ಕಳೆದುಕೊಂಡ ಹಣದ ಬೆನ್ನತ್ತಿದ ಪೊಲೀಸರಿಗೆ 70 ಕೋಟಿ ರೂ. ಗಳಲ್ಲಿ ವಶಪಡಿಸಿಕೊಳ್ಳಲು ಸಿಕ್ಕಿದ್ದು 6 ಕೋಟಿ ರೂ. ಮಾತ್ರ.
ತಕ್ಷಣವೇ ಪೊಲೀಸ್ ಸಹಾಯವಾಣಿ ಸಂಪರ್ಕಿಸಿ
ವಂಚಕರು ಹೊಸ, ಹೊಸ ವಿಧಾನದಲ್ಲಿ ಜನರನ್ನು ಮೋಸ ಮಾಡುವುದು ಕಂಡುಬರುತ್ತಿದೆ. ಹಾಗಾಗಿ ಹೊಸದಾಗಿ ನಡೆಯುತ್ತಿರುವ ವಂಚನೆ ಪ್ರಕರಣಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಯಾರೇ ವಂಚನೆಗೆ ಒಳಗಾದರೂ ತಕ್ಷಣವೇ ಪೊಲೀಸ್ ಸಹಾಯವಾಣಿ ಸಂಪರ್ಕಿಸಬೇಕು.
ಸ್ನೇಹರಾಜ್
ಎಸಿಪಿ, ಮೈಸೂರು ನಗರ ಸೆನ್ ವಿಭಾಗ