ಜಿಲ್ಲೆ

ಶಿಕ್ಷಣ, ಸಂಸ್ಕಾರ ಪಡೆದ ಮಕ್ಕಳು ದೇಶದ ಆಸ್ತಿ

ಸಕಲೇಶಪುರ: ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ಪಡೆದು ವಿದ್ಯಾರ್ಥಿಗಳು ದೇಶಕ್ಕೆ ದೊಡ್ಡ ಆಸ್ತಿಯಾಗಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕ ಗಳಿಸಿದ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮಕ್ಕಳಿಗೆ ಹಾಗೂ ತಾಲೂಕಿನ ಎಲ್ಲ ಪ್ರೌಢಶಾಲಾ ಶಿಕ್ಷಕರಿಗೆ ಶಾಸಕ ಸಿಮೆಂಟ್ ಮಂಜು ಅವರು ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 5ನೇ ಸ್ಥಾನ ಹಾಗೂ ಜಿಲ್ಲೆಯ 8 ತಾಲೂಕುಗಳಲ್ಲಿ ಸಕಲೇಶಪುರ ತಾಲೂಕು ನಂ.1 ಸ್ಥಾನ ಪಡೆದಿರುವುದು ಅತ್ಯಂತ ಸಂತೋಷದ ಸಂಗತಿ ಎಂದರು.

ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅಂಕಗಳನ್ನು ಪಡೆಯಲು ಕಾರಣವೆಂದರೆ ಶಿಕ್ಷಕರು. ಹೀಗಾಗಿ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅಭಿನಂದಿಸುವುದು ನಮ್ಮ ಕರ್ತವ್ಯ. ಮಕ್ಕಳ ಉತ್ತಮ ಭವಿಷ್ಯಕ್ಕೆ ಶಿಕ್ಷಕರು ಕಾರಣರಾಗಿದ್ದು, ದೇಶದ ಅಭಿವೃದ್ಧಿ ಎಷ್ಟು ಮಕ್ಕಳು ಶಿಕ್ಷಣ ಪಡೆಯುತ್ತಾರೆ ಎಂಬುದರ ಮೇಲೆ ನಿಂತಿದೆ. ಎಲ್ಲಿ ಉತ್ತಮ ಶಿಕ್ಷಣ, ಉತ್ತಮ ಸಂಸ್ಕಾರ ಸಿಗುತ್ತದೆಯೋ ಅಂತಹ ಕಡೆ ಮಕ್ಕಳು ದೇಶದ ಆಸ್ತಿಯಾಗುತ್ತಾರೆ ಎಂದರು.

ಮಲೆನಾಡು ಭಾಗದಲ್ಲಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಡಾನೆಗಳ ಕಾಟ, ವಿಪರೀತ ಮಳೆ, ಶಿಕ್ಷಕರ ಕೊರತೆ ನಡುವೆ ಈ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ, ಮಕ್ಕಳು ಉತ್ತಮ ಅಂಕ ಪಡೆದರೆ ಶಿಕ್ಷಕರಿಗೆ ಮೌಲ್ಯ ದೊರಕುತ್ತದೆ. ಶಿಕ್ಷಕರು ದೇವರ ಸ್ಥಾನದಲ್ಲಿ ನಿಂತು ಮಕ್ಕಳಿಗೆ ಶಿಕ್ಷಣ ನೀಡುತ್ತೀರಾ.. ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡವನ್ನು ಮೀರಿಸಿ ಶಿಕ್ಷಣದ ಕ್ರಾಂತಿ ಇಲ್ಲಾಗಬೇಕು. ಇದಕ್ಕೆ ಬೇಕಾದ ವಾತಾವರಣವನ್ನು ನಿರ್ಮಾಣ ಮಾಡಲು ನಾವೆಲ್ಲರು ಕೈಜೋಡಿಸೋಣ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ಮಾತನಾಡಿ, ಸಕಲೇಶಪುರ ತಾಲೂಕು ಅತ್ಯಂತ ವಿಭಿನ್ನ ಭೌಗೋಳಿಕ ರಚನೆ ಹೊಂದಿದೆ. ವಿಸ್ತೀರ್ಣ ದೊಡ್ಡದು. ಆದರೆ ಶಿಕ್ಷಕರ ಸಂಖ್ಯೆ ಕಡಿಮೆಯಿದೆ. ಅತಿಥಿ ಶಿಕ್ಷಕರನ್ನು ಇಟ್ಟುಕೊಂಡು ಈ ಬಾರಿ ರಾಜ್ಯದಲ್ಲಿ 5 ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಕಷ್ಟಕರ ಪರಿಸ್ಥಿತಿಯಲ್ಲಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಶಾಲೆಗಳಲ್ಲಿ ಶಿಕ್ಷಕರೇ ಇರುವುದಿಲ್ಲ. ಅತಿಥಿ ಶಿಕ್ಷಕರು ಹಲವು ವಿಷಯಗಳಿಗೆ ಸಿಗುತ್ತಿಲ್ಲ. ಆದರೂ ತಾಲೂಕಿನ ಶಿಕ್ಷಕರು ವಿದ್ಯಾರ್ಥಿಗಳ ಏಳಿಗೆಗೆ ಸಂಪೂರ್ಣ ತೊಡಗಿಸಿಕೊಳ್ಳುವುದರಿಂದ ಇಂದು ತಾಲೂಕು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಲು ಕಾರಣವಾಗಿದೆ ಎಂದರು.

ವಿದ್ಯಾರ್ಥಿಗಳ ಏಳಿಗೆಯಲ್ಲಿ ಪಾಲಕರ ಪಾತ್ರ ದೊಡ್ಡದು. 8 ಸರ್ಕಾರಿ ಶಾಲೆಗಳು ತಾಲೂಕಿನಲ್ಲಿ ಶೇ.100 ಫಲಿತಾಂಶ ಪಡೆದಿವೆ. ಅಲ್ಲದೆ ಒಟ್ಟಾರೆಯಾಗಿ ತಾಲೂಕು ಶೇ.93.5 ಫಲಿತಾಂಶ ಪಡೆದು ಜಿಲ್ಲೆಯ ಶೇಕಡವಾರು ಫಲಿತಾಂಶಕ್ಕಿಂತ ಶೇ.11 ಅಧಿಕವಾಗಿದೆ. ಹೀಗಾಗಿ ಜಿಲ್ಲೆ ರಾಜ್ಯದಲ್ಲಿ 6ನೇ ಸ್ಥಾನ ಪಡೆಯಲು ಸಕಲೇಶಪುರದ ಪಾತ್ರ ದೊಡ್ಡದಾಗಿದೆ. ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿದ್ದಾರೆ. 600ಕ್ಕೂ ಹೆಚ್ಚು ಅಂಕವನ್ನು ತಾಲೂಕಿನಲ್ಲಿ 36 ವಿದ್ಯಾರ್ಥಿಗಳು ಪಡೆದಿದ್ದಾರೆ. ಶಾಸಕರು ಈ ರೀತಿ ಪ್ರತಿಭಾ ಪುರಸ್ಕಾರವನ್ನು ಆಯೋಜಿಸಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು.

ಇದೇ ವೇಳೆ ಬಿಇಒ ಪುಷ್ಪಾ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಮುಖಂಡರಾದ ಬಾಳ್ಳು ಮಲ್ಲಿಕಾರ್ಜುನ್, ಬ್ಯಾಕರವಳ್ಳಿ ಜಯಣ್ಣ, ಪ್ರತಾಪ್, ಅಶ್ವತ್ಥ್, ರಾಮಚಂದ್ರೇಗೌಡ, ಪುರಸಭೆ ಸದಸ್ಯೆ ವನಜಾಕ್ಷಿ, ಡಾ.ಸುಧಾಕರ್, ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಆನಂದ್, ಜಗದೀಶ್, ರೇಣುಕಾರಾದ್ಯ, ಮಲ್ನಾಡ್ ಜಾಕೀರ್ ಇತರರು ಇದ್ದರು.