ಜಿಲ್ಲೆ

ಪ್ರತಿಭಾನ್ವೇಷಣೆ ಪರೀಕ್ಷೆಗೆ ಬರೆದ ವಿದ್ಯಾರ್ಥಿಗಳು

ಮಂಜುನಾಥ ಕೋಳಿಗುಡ್ಡ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಎಲ್ಲ ರೀತಿಯ ಪರೀಕ್ಷೆಗಳನ್ನು ಎದುರಿಸಲು ಪ್ರಾಥಮಿಕ ಹಂತದಿಂದಲೇ ಮೈಗೂಡಿಸಿಕೊಳ್ಳಬೇಕು. ಹೀಗಾಗಿ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಪ್ರತಿಭಾನ್ವೇಷಣೆ ಪರೀಕ್ಷೆ (ಟ್ಯಾಲೆಂಟ್ ಸರ್ಚ್)ಸ್ಫೂರ್ತಿ ಎಂದು ಜಿಪಂ ಸಿಇಒ ರಾಹುಲ ಶಿಂಧೆ ತಿಳಿಸಿದರು.

ನಗರದ ಸರ್ಕಾರಿ ಸರ್ದಾರ ಪ್ರೌಢಶಾಲೆಗೆ ಗುರುವಾರ ಭೇಟಿ ನೀಡಿ ಪ್ರತಿಭಾನ್ವೇಷಣೆ ಪರೀಕ್ಷಾ ವ್ಯವಸ್ಥೆ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಜಿಲ್ಲಾದ್ಯಂತ ನಡೆದ, ಸರಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಪರೀಕ್ಷೆಗೆ ಬಹಳ ಮುಖ್ಯವಾಗಿದೆ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.

ಪ್ರತಿಭಾನ್ವೇಷಣೆ ಪರೀಕ್ಷೆಯ ಅವಶ್ಯಕತೆ ಉಪಯುಕ್ತತತೆ ಮತ್ತು ಪ್ರಶ್ನೆಗಳ ಗುಣಮಟ್ಟ, ಪರೀಕ್ಷಾ ವ್ಯವಸ್ಥೆಯ ಬದಲಾವಣೆಯ ಅವಶ್ಯಕತೆ ಇತ್ಯಾದಿ ಕುರಿತು ವಿಚಾರ ಹಂಚಿಕೊಂಡರು. ಸ್ಫರ್ಧಾತ್ಮಕ ಪರೀಕ್ಷೆಗಳು ಮಕ್ಕಳ ಭವಿಷ್ಯಕ್ಕೆ ಹೆಚ್ಚು ಉಪಯುಕ್ತವಾಗಿದ್ದು ಇಂತಹ ಪರೀಕ್ಷೆಗಳಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸೂಕ್ತ ಸಿದ್ಧತೆ ಮತ್ತು ಆತ್ಮಸ್ಥೈರ್ಯ ಮೂಡುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿ ಹೇಳಿದರು.

ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಗಳು ಆಗುತ್ತಿದ್ದು, ವಿನೂತ ತಂತ್ರಜ್ಞಾನದ ಮೂಲಕ ಕಲಿಯುವ ಪ್ರಮಾಣ ಕೂಡ ಹೆಚ್ಚಳವಾಗಿದೆ. ಹೀಗಾಗಿ ಶಿಕ್ಷಣ ವಲಯದಲ್ಲಿ ಹೆಚ್ಚುತ್ತಿರುವ ಸ್ಪರ್ಧೆ ಎದುರಿಸಲು ವಿದ್ಯಾರ್ಥಿಗಳು ಪ್ರಾಥಮಿಕ ಕಲಿಕಾ ಹಂತದಲ್ಲಿ ಸಜ್ಜುಗೊಳ್ಳುವುದು ಅವಶ್ಯಕವಾಗಿದೆ.ಅದಕ್ಕೂ ಪೂರಕವಾಗುವಂತೆ ಜಿಪಂನಿಂದ ಪ್ರತಿಭಾನ್ವೇಷಣೆ ಪರೀಕ್ಷೆ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

ಡಯಟ್ ಪ್ರಾಚಾರ್ಯ ಬಸವರಾಜ ನಲವತವಾಡ, ಬಿ.ಇ.ಓ. ರವಿ ಭಜಂತ್ರಿ , ಉಪ ಪ್ರಾಂಶುಪಾಲರಾದ ಶಿವಶಂಕರ ಹಾದಿಮನಿ ಇತರರಿದ್ದರು.