ಜಿಲ್ಲೆ

ತಲ್ಲೂರು ಕನಕಾ- ಅಣ್ಣಯ್ಯ ಶೆಟ್ಟಿ ಸಂಸ್ಮರಣ ಪ್ರಶಸ್ತಿ ಪ್ರದಾನ

ಉಡುಪಿ: ಬಾಬು ರೈಗಳು ಶತಾಯುಷಿ ಕಲಾವಿದರಷ್ಟೇ ಅಲ್ಲದೆ ಶತಮಾನದ ಶ್ರೇಷ್ಠ ಕಲಾವಿದರು. ಅವರ ವಿನಯಗುಣ, ಸರಳತೆ, ಜೀವನೋತ್ಸಾಹ ಕಿರಿಯರಿಗೆ ಮಾದರಿಯಾಗಿದೆ. ಸಾಮಾಜಿಕ, ಸಾಂಸ್ಕತಿಕ ಕಾಳಜಿಯಿಂದ ಕೆಲಸ ಮಾಡುತ್ತಿರುವ ಉಡುಪಿ ಯಕ್ಷಗಾನ ಕಲಾರಂಗ ಅಭಿನಂದನಾರ್ಹ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ನುಡಿದರು.

ಮಂಗಳವಾರ ಎಡನೀರು ಮಠದಲ್ಲಿ ಯಕ್ಷಗಾನ ಕಲಾರಂಗದ ವತಿಯಿಂದ ನೀಡಲಾಗುವ 40 ಸಾವಿರ ರೂ. ಮೊತ್ತದ ತಲ್ಲೂರು ಕನಕಾ- ಅಣ್ಣಯ್ಯ ಶೆಟ್ಟಿ ಸಂಸ್ಮರಣ ಪ್ರಶಸ್ತಿಯನ್ನು ಹಿರಿಯ ಮೃದಂಗ ವಾದಕ ವಿದ್ವಾನ್​ ಕೆ. ಬಾಬು ರೈ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.

ತಲ್ಲೂರು ಫ್ಯಾಮಿಲಿ ಟ್ರಸ್ಟ್​ನ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಗಿರಿಜಾ ಶಿವರಾಮ ಶೆಟ್ಟಿ, ಪ್ರದಿಪ ಕುಮಾರ್​ ಕಲ್ಕೂರ, ಕೆ. ಬಾಬು ರೈ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ರಾಮಪ್ರಸಾದ ಕಾಸರಗೋಡು, ಕಾರ್ಯದರ್ಶಿ ಶಿವರಾಮ ಕಾಸರಗೋಡು, ಸಂಸ್ಥೆಯ ದಾನಿ ಡಾ. ಜೆ. ಎನ್​. ಭಟ್​, ಯು. ಎಸ್​. ರಾಜಗೋಪಾಲ ಆಚಾರ್ಯ ಹಾಗೂ ಉಪಾಧ್ಯಕ್ಷ ಎಸ್​. ವಿ. ಭಟ್​, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್​. ಎನ್​. ಶೃಂಗೇಶ್ವರ ಮತ್ತು ಸದಸ್ಯರುಗಳಾದ ಎಂ. ಎಲ್​. ಸಾಮಗ, ಪ್ರತಿಭಾ ಎಂ. ಎಲ್​. ಸಾಮಗ, ವಿದ್ಯಾಪ್ರಸಾದ್​, ರಾಜೀವಿ, ಸುದರ್ಶನ್​ ಬಾಯರಿ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್​ ಸ್ವಾಮೀಜೀಯವರಿಗೆ ಫಲವಸ್ತು ಸಮರ್ಪಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್​ ಅಭಿನಂದನೆಯ ಮಾತುಗಳನ್ನಾಡಿದರು.