ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ನಾಲ್ಕನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಪೂರ್ವಭಾವಿಯಾಗಿ ವ್ಯಾಸಪೂಜೆ ನೆರವೇರಿಸಿದರು. 
ಜಿಲ್ಲೆ

ಎಡನೀರು ಶ್ರೀ ಚಾತುರ್ಮಾಸ್ಯ ಆರಂಭ : 60 ದಿನಗಳ ಅಖಂಡ ಭಜನಾ ಸಂಕೀರ್ತನೆಗೆ ಚಾಲನೆ : ವ್ಯಾಸಪೂಜೆ, ಗಣಪತಿ ಹೋಮ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ನಾಲ್ಕನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ಆರಂಭಗೊಂಡಿತು.

ಬೆಳಗ್ಗೆ ವ್ಯಾಸ ಪೂಜೆ, ಶ್ರೀ ಮಹಾಗಣಪತಿ ಹೋಮ ನಡೆಯಿತು. ವ್ಯಾಸಪೂಜೆ ನೆರವೇರಿಸುವ ಮೂಲಕ ಶ್ರೀ ಎಡನೀರು ಶ್ರೀಗಳು ತಮ್ಮ 60 ದಿನಗಳ ಚಾತುರ್ಮಾಸ್ಯ ವ್ರತಾಚರಣೆ ಆರಂಭಿಸಿದರು.

60 ದಿವಸಗಳ ಕಾಲ ನಡೆಯಲಿರುವ ಅಖಂಡ ಭಜನಾ ಸಂಕೀರ್ತನೆಯನ್ನು ಕೇರಳ ಚಿನ್ಮಯ ಮಿಶನ್ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಉದ್ಘಾಟಿಸಿದರು.

ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಉದ್ಯಮಿ ಕೆ.ಕೆ.ಶೆಟ್ಟಿ ಉದ್ಘಾಟಿಸಿದರು. ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಭಾಗವತ ಸತ್ಯನಾರಾಯಣ ಪುಣಿಂಚಿತ್ತಾಯ ಪ್ರಾರ್ಥನೆ ಹಾಡಿದರು. ವಕೀಲ ಎಂ.ನಾರಾಯಣ ಭಟ್ ಸ್ವಾಗತಿಸಿದರು. ಹಿರಣ್ಯ ವೆಂಕಟೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ಡಾ.ಭಾಸ್ಕರ ಪುತ್ತೂರು ವಂದಿಸಿದರು.

ಆ.3ರಿಂದ ಭಾಗವತ, ಯಕ್ಷಗಾನ ನವಾಹ: ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಸೇವಾ ರೂಪದಲ್ಲಿ ಶ್ರೀಮದ್ ದೇವೀ ಭಾಗವತ ನವಾಹ ಹಾಗೂ ಯಕ್ಷಗಾನ ತಾಳಮದ್ದಳೆ ನವಾಹ ಕಾರ್ಯಕ್ರಮ ಆ.3ರಿಂದ 11ರವರೆಗೆ ಜರುಗಲಿದೆ.

ಭಕ್ತಿ ಸಂಗೀತ, ಯಕ್ಷಗಾನ

ಬಳ್ಳಪದವು ಯೋಗೀಶ್ ಶರ್ಮ ಮತ್ತು ಬಳಗದವರಿಂದ ಭಕ್ತಿ ಸಂಗೀತ ನಡೆಯಿತು. ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಹಾಡುಗಾರಿಕೆ, ಮಾಞೂರ್ ರಂಜಿತ್ ವಯಲಿನ್, ಚೇರ್ತಲ ಜಿ.ಕೃಷ್ಣ ಕುಮಾರ್ ಮೃದಂಗ, ಮಾಞೂರ್ ಉನ್ಣಿಕೃಷ್ಣನ್ ಘಟಂ, ರತ್ನಶ್ರೀ ಅಯ್ಯರ್ ವೈಕ್ಕಂ ತಬಲಾದಲ್ಲಿ ಸಹಕರಿಸಿದರು. ನಂತರ ಬಡಗು ಯಕ್ಷ ವೈಭವದಲ್ಲಿ ‘ಕಾಳಿದಾಸ ದಾಕ್ಷಾಯಿಣಿ’ ಯಕ್ಷಗಾನ ಬಯಲಾಟ ನಡೆಯಿತು.