ಜಿಲ್ಲೆ

ಕಾಂಗ್ರೆಸ್ ಶಾಸಕರಿಗೆ ಇಡಿ ಡ್ರಿಲ್, ಸಚಿವ ಎಂ.ಬಿ. ಪಾಟೀಲರು ಏನಂದ್ರು ಗೊತ್ತಾ?

ವಿಜಯಪುರ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್‌ಐಟಿ ತನಿಖೆ ಮಾಡುತ್ತಿದೆ. ಎಸ್‌ಐಟಿ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಆದರೆ, ಇದೀಗ ಜಾರಿ ನಿರ್ದೇಶನಾಲಯ (ಇಡಿ) ಕೂಡ ತನಿಖೆ ಮಾಡುತ್ತಿದೆ. ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೇ ನಿಸ್ಪಕ್ಷಪಾತ ತನಿಖೆಯಾಗಬೇಕೆಂಬುದಷ್ಟೇ ನಮ್ಮ ಆಗ್ರಹ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.

ಶಾಸಕರಾದ ಬಿ. ನಾಗೇಂದ್ರ ಹಾಗೂ ಬಸನಗೌಡ ದದ್ದಲ್ ನಿವಾಸದಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ತನಿಖೆಗೆ ಸಂಬಂಧಿಸಿದಂತೆ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಪ್ರಕರಣದಲ್ಲಿ ನಾಗೇಂದ್ರ ಪಾತ್ರ ಇದೆಯೋ ಇಲ್ಲವೋ ಎಂಬುದರ ತನಿಖೆ ನಿಸ್ಪಕ್ಷಪಾತವಾಗಿರಲಿ. ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೇ ತನಿಖೆಯಾಗಲಿ, ತಪ್ಪಿತಸ್ಥರು ಯಾರಿದ್ದಾರೆ ಅವರಿಗೆ ಶಿಕ್ಷೆಯಾಗಬೇಕು ಎಂದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಅವಧಿಯಲ್ಲೇ ನಿವೇಶನ ಹಂಚಿಕೆಯಾಗಿರುವುದು. ಆ ಬಗ್ಗೆ ಅವರು ಉತ್ತರಿಸಿದ್ದಾರೆ ಎಂದರು.