* ಬಿಡದಿ ಭಾಗದ ರೈತರ ಅಳಲು
* ಹೆಚ್ಚಿನ ಪರಿಹಾರಕ್ಕೆ ಆಗ್ರಹ
ಗಂಗಾಧರ್ ಬೈರಾಪಟ್ಟಣ ರಾಮನಗರ
ನಾಡಿಗೆ ಬೆಳಕು ನೀಡುವ ಯೋಜನೆಯೊಂದು, ಬಿಡದಿ ಹೋಬಳಿ ಗಾಣಕಲ್ ಸೇರಿ ವಿವಿಧ ಗ್ರಾಮಗಳ ಹಲವು ರೈತರ ಬಾಳಲ್ಲಿ ಕತ್ತಲೆ ಮೂಡಿಸಿದ್ದು, ವಿದ್ಯುತ್ ಸಾಗಣೆ ಮಾಡಲು ಹಾಕುತ್ತಿರುವ ಮತ್ತೊಂದು ಮಾರ್ಗಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಎನ್‌ಟಿಪಿಸಿಎಲ್) ವಿಜಯಪುರ ಜಿಲ್ಲೆಯ ಕೂಡಗಿಯಿಂದ ಬಿಡದಿಗೆ ಸುಮಾರು 400 ಕೆವಿ ವಿದ್ಯುತ್ ಪೂರೈಕೆ ಮಾರ್ಗ ನಿರ್ಮಿಸಿದೆ. ಕೆಪಿಟಿಸಿಎಲ್ ಮತ್ತೆ ಬಿಡದಿಯಿಂದ ಮಾಗಡಿಗೆ 220 ಕೆವಿ ಮಾರ್ಗವನ್ನು ನಿರ್ಮಾಣ ಮಾಡುತ್ತಿದ್ದು, ಇದರಿಂದ ಹಲವು ರೈತರು ಈಗ ಕಂಗಾಲಾಗಿ ಸೂಕ್ತ ಪರಿಹಾರ ಕೊಡದೇ ಮಾರ್ಗ ನಿರ್ಮಾಣ ಮಾಡುತ್ತಿರುವುದಕ್ಕೆ ತೀವ್ರ ವಿರೋ‘ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ವಿಜಯಪುರ ಜಿಲ್ಲೆಯ ಕೂಡಗಿಯಿಂದ ಬಿಡದಿಗೆ ಸುಮಾರು 400 ಕೆವಿ ವಿದ್ಯುತ್ ಪೂರೈಕೆ ಮಾರ್ಗವನ್ನು ನಿರ್ಮಿಸಿದ್ದು, ಮತ್ತೆ ಬಿಡದಿಯಿಂದ ಮಾಗಡಿಗೆ ಹೋಗುವ 220 ಕೆವಿ ಮಾರ್ಗದ ನಿರ್ಮಾಣ ಕಾರ್ಯ ಬಿಡದಿ ಹೋಬಳಿ ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಗೆ ಗಾಣಕಲ್‌ನಲ್ಲಿ ನಡೆಯುತ್ತಿದೆ. ಈ ಭಾಗದ ಗಾಣಕಲ್, ಬೆತ್ತನೆಗೆರೆ, ಮುತ್ತರಾಯನಪಾಳ್ಯ, ಅವರಗೆರೆ ಭಾಗದಲ್ಲಿ ಎಚ್‌ಟಿ ಲೈನ್ ಹಾದು ಹೋಗುತ್ತಿದೆ. ಆದರೆ, ಈಗ ಜಮೀನಿನಲ್ಲಿ ಸುಮಾರು 60 ಅಡಿಗೂ ಅಧಿಕ ಸ್ಥಳದ ಅಗತ್ಯವಿದೆ, ಈಗಾಗಲೇ ಒಂದು ಲೈನ್‌ಗೆ ಜಾಗಕೊಟ್ಟು ನಷ್ಟ ಮತ್ತು ಕಷ್ಟ ಎರಡನ್ನೂ ಅನುಭವಿಸುತ್ತಿರುವ ರೈತರು ಮತ್ತೆ ಇದೇ ತಪ್ಪನ್ನು ಮಾಡಲು ಸಿದ್ಧರಿಲ್ಲ.
ಪ್ರಸ್ತುತ ಗಾಣಕಲ್ ಸುತ್ತ ಮುತ್ತಲ ಪ್ರದೇಶದಲ್ಲಿ ಒಂದು ಎಕರೆ ಜಮೀನು 3 ಕೋಟಿ ರೂ. ಆಸುಪಾಸಿನಲ್ಲಿ ಇದೆ. ಆದರೆ, ಕೆಪಿಟಿಸಿಎಲ್ ನಿರ್ಮಾಣ ಮಾಡುತ್ತಿರುವ ಹೊಸ ಮಾರ್ಗ ಹಾದು ಹೋಗುವ ರೈತರ ಜಮೀನಿಗೆ ಕೇವಲ ಕನಿಷ್ಠ 2.70 ಲಕ್ಷ ರೂ. ನಿಂದ ಗರಿಷ್ಠ 5.50 ಲಕ್ಷ ರೂ. ವರೆಗೆ ಪರಿಹಾರ ನೀಡಲು ಮುಂದಾಗಿದೆ. ಆದರೆ, ಇಷ್ಟು ಕಡಿಮೆ ಮೊತ್ತಕ್ಕೆ ಜಮೀನು ಏಕೆ ನೀಡಬೇಕು ಎನ್ನುವ ಪ್ರಶ್ನೆಯನ್ನು ರೈತರು ಅಧಿಕಾರಿಗಳ ಮುಂದೆ ಇಡುತ್ತಿದ್ದಾರೆ. ಅಲ್ಲದೆ, ಒಮ್ಮೆ ಜಮೀನಿನ ಮೇಲೆ ಎಚ್‌ಟಿ (ಹೈ ಟೆನ್‌ಷನ್) ವಿದ್ಯುತ್ ಮಾರ್ಗಗಳು ಹಾದು ಹೋದರೆ, ಕೋಟಿ ರೂ. ಬಾಳುವ ಜಮೀನನ್ನು ಯಾರು ತಾನೆ ಖರೀದಿಸುತ್ತಾರೆ ಎನ್ನುವ ಆತಂಕ ರೈತರನ್ನು ಆವರಿಸಿದೆ.
ಈಗಾಗಲೇ ಒಂದು ಎಚ್‌ಟಿ ಲೈನ್ ಹಾದು ಹೋಗಿದ್ದು, ಈಗಾಗಲೇ ನಷ್ಟ ಅನುಭವಿಸಿದ್ದೇವೆ. ಈಗ ಮತ್ತೊಂದು ಲೈನ್ ಹಾದು ಹೋದರೆ ನಮ್ಮ ಜಮೀನು ಸಂಪೂರ್ಣ ಬೆಲೆ ಕಳೆದುಕೊಳ್ಳಲಿದೆ. ಜತೆಗೆ ಇಲ್ಲಿ ವ್ಯವಸಾಯ ಮಾಡುವುದು ಸಾಹಸದ ಕೆಲಸವಾಗುತ್ತದೆ. ಪ್ರಾಣದ ಹಂಗುತೊರೆದೇ ವ್ಯವಸಾಯ ಮಾಡಬೇಕಾಗುತ್ತದೆ ಎನ್ನುವುದು ರೈತರ ಅಳಲು. ಅಲ್ಲದೆ ಲೈನ್ ಹಾದು ಹೋಗುವ ಜಮೀನಿನ ಎಲ್ಲ ಮಾಲೀಕರು ಅತಿ ಸಣ್ಣ ಮಾಲೀಕರಾಗಿದ್ದು, ಲೈನ್ ಹಾದು ಹೋಗುವುದರಿಂದ ಎಲ್ಲರ ಜೀವನ ಬೀದಿಗೆ ಬೀಳುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ನಾವು ಕೊಟ್ಟಷ್ಟು ಹಣ ಪಡೆದು ಯೋಜನೆಗೆ ಭೂಮಿ ಕೊಡಿ ಎನ್ನುವ ಕಂಪನಿ, ಕಾನೂನು ಬದ್ದವಾಗಿ ನಮ್ಮ ಜಮೀನಿಗೆ ಬೆಲೆಯನ್ನು ನೀಡಲಿ. ಯೋಜನೆಗೆ ನಮ್ಮ ವಿರೋಧ ಇಲ್ಲ, ಆದರೆ ನಮ್ಮ ಬದುಕು ಬೀದಿಗೆ ಬೀಳುವಾಗ ನಾವು ಹೇಗೆತಾನೇ ಜಮೀನು ನೀಡಲು ಸಾಧ್ಯ ಎನ್ನುವುದು ರೈತರ ಪ್ರಶ್ನೆಯಾಗಿದೆ. ಅಲ್ಲದೆ, 2013ರ ರ ಭೂಸ್ವಾಧೀನ ಕಾಯ್ದೆಯಂತೆಯೇ ನಮಗೂ ಪರಿಹಾರ ನೀಡಿ ನಮ್ಮ ಜಮೀನಿನ ಮೇಲೆ ಲೈನ್ ತೆಗೆದುಕೊಂಡು ಹೋಗಲಿ ಎನ್ನುವುದು ರೈತರ ಆಗ್ರಹವಾಗಿದೆ.
2013ರ ‘ಭೂ ಸ್ವಾಧೀನ ಕಾಯ್ದೆ ಅನ್ವಯ ಪರಿಹಾರ ನೀಡುವಂತೆ ಇತ್ತೀಚಿಗೆ ರಾಮನಗರಕ್ಕೆ ಬೇಟಿ ನೀಡಿದ್ದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೂ ರೈತರು ಹಾಗೂ ಈ ಭಾಗದ ಮುಖಂಡರು ಮನವಿ ಮಾಡಿದ್ದಾರೆ. ನಿಗಧಿ ಮಾಡಿರುವ ಪರಿಹಾರ ನಮಗೆ ಬೇಡ. ಭೂ ಸ್ವಾಧೀನ ಕಾಯ್ದೆ 2013ರ ಅನ್ವಯವೇ ನಮಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಇದಕ್ಕೆ ಸೂಕ್ತ ಉತ್ತರ ಮಾತ್ರ ಸಚಿವರು ಹಾಗೂ ಅಧಿಕಾರಿಗಳಿಂದ ಬರಲಿಲ್ಲ ಎನ್ನುವುದು ರೈತರ ಬೇಸರ.
ಯೋಜನೆಗೆ ನಮ್ಮ ವಿರೋಧ ಇಲ್ಲ. ಆದರೆ, ಈಗ ಮತ್ತೆ ಜಮೀನಿನ ಮೇಲೆ ಲೈನ್ ಹಾದು ಹೋದರೆ ನಮ್ಮ ಜಮೀನು ಸಂಪೂರ್ಣವಾಗಿ ಬೆಲೆ ಕಳೆದುಕೊಳ್ಳಲಿದೆ. ಇಲ್ಲಿ ಎಕರೆಗೆ ಕನಿಷ್ಠ 3 ಕೋಟಿ ರೂ. ಬೆಲೆ ಇದೆ. ಲೈನ್ ಹಾದು ಹೋಗುವುದರಿಂದ ನಮ್ಮ ಜಮೀನನನ್ನು ಯಾರೂ ಕೇಳುವುದಿಲ್ಲ.ಸಂತೋಷ್, ಗಾಣಕಲ್, ರೈತ.2013ರ ಭೂ ಸ್ವಾಧೀನ ಕಾಯ್ದೆಯಂತೆ ಪರಿಹಾರ ನೀಡುವಂತೆ ಸಚಿವರಿಗೂ ಮನವಿ ಮಾಡಿದ್ದೇವೆ. ಹಿಂದೆ ಒಂದು ಲೈನ್‌ಗೆ ಜಮೀನು ಕೊಟ್ಟು ರೈತರು ಕಷ್ಟ ಅನುಭವಿಸುತ್ತಿದ್ದಾರೆ. ಈಗ ಮತ್ತೊಂದು ಲೈನ್‌ಗೆ ಸೂಕ್ತ ಪರಿಹಾರ ಇಲ್ಲದೆ ಜಮೀನು ಕೊಡಲು ಸಾಧ್ಯವೇ?ಜಿ.ಎನ್.ನಟರಾಜ್, ಅಧ್ಯಕ್ಷ ಜಿಬಿಡಿಎ ರಾಮನಗರ