ಬೆಂಗಳೂರು: ದೇಶದಿಂದ ರಫ್ತು ಪ್ರಮಾಣ ಹೆಚ್ಚಳಗೊಂಡಲ್ಲಿ ಆರ್ಥಿಕತೆಗೆ ಅಧಿಕ ಬಲ ಸಿಗಲಿದ್ದು, ಉದ್ದಿಮೆದಾರರು ಉದ್ಯಮ ಬೆಳಸುವ ಜತೆಗೆ ರಫ್ತಿನತ್ತಲೂ ಗಮನ ನೀಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.
ನಗರದ ಅರಮನೆ ಮೈದಾನದಲ್ಲಿ ಲಘು ಉದ್ಯೋಗ ಭಾರತೀ ಸಂಘಟನೆಯ ಬೆಂಗಳೂರು ಉತ್ತರ ಘಟಕವು ಆಯೋಜಿಸಿದ್ದ ‘ಸರ್ಫೇಸ್ ಎಕ್ಸ್‌ಪೊ - 2024’ರ ಸಮಾರೋಪದಲ್ಲಿ ಪಾಲ್ಗೊಂಡು ಶನಿವಾರ ಮಾತನಾಡಿದರು.
ಭಾರತದ ಆರ್ಥಿಕತೆಯಲ್ಲಿ ರಫ್ತು ವಲಯ ಪ್ರಮುಖ ಪಾತ್ರ ವಹಿಸುತ್ತಿದೆ. ರಕ್ಷಣಾ ಸಾಮಗ್ರಿ ಸಹಿತ ವಿವಿಧ ಬಗೆಯ ಉತ್ಪನ್ನಗಳು ಸ್ಥಳೀಯವಾಗಿ ತಯಾರಾಗಿ ವಿದೇಶಗಳಲ್ಲಿ ಮಾರಾಟವಾಗುತ್ತಿವೆ. ಇದರಿಂದ ನಮ್ಮ ರಾಷ್ಟ್ರದ ಹಲವು ವಸ್ತುಗಳಿಗೆ ವಿದೇಶದಲ್ಲಿ ಬಹುಬೇಡಿಕೆ ಬರುತ್ತಿದೆ. ಕಿರು ಉದ್ದಿಮೆದಾರರು ಕೂಡ ಹೊಸ ತಾಂತ್ರಿಕತೆಯನ್ನು ಬಳಸಿಕೊಂಡು ಉದ್ಯಮವನ್ನು ವಿಸ್ತರಿಸಬೇಕು. ಈ ಮೂಲಕ ಉದ್ಯೋಗ ಸೃಷ್ಟಿಯ ಜತೆಗೆ ರಫ್ತಿಗೂ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಏಸ್ ಡಿಸೈನರ್ಸ್ ಲಿ.ನ ವ್ಯವಸ್ಥಾಪಕ ನಿರ್ದೇಶಕ ಟಿ.ಕೆ.ರಮೇಶ್, ಲಘು ಉದ್ಯೋಗ ಭಾರತೀ ಸಂಘಟನೆಯ ಬೆಂಗಳೂರು ಉತ್ತರ ಘಟಕದ ಅಧ್ಯಕ್ಷ ಸಂಜಯ್ ಪಿ. ಭಟ್, ಕಾರ್ಯದರ್ಶಿ ನಾಗರಾಜ್ ಬಿ.ಎಸ್, ಮಯಾಂಕ್ ಕೌಶಿಕ್ ಮತ್ತು ರಾಮೇಶ್ ನಾಯ್ಡು ಹಾಜರಿದ್ದರು.