ಉಡುಪಿ: ಬ್ಯಾಂಕಿಂಗ್ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಕೆ.ವಿ. ಕಾಮತ್ ಅವರ ನಾಯಕತ್ವ ಹಾಗೂ ದೂರದೃಷ್ಟಿತ್ವ ಯುವಸಮುದಾಯಕ್ಕೆ ಪ್ರೇರಣಾದಾಯಕವಾಗಿದೆ. ದೇಶದ ಆರ್ಥಿಕ ವಲಯಕ್ಕೆ ಸಂಬಂಧಿಸಿ ಆಳ ಜ್ಞಾನ ಹೊಂದಿರುವ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ ಎಂದು ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಶ್ಲಾಘಿಸಿದರು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ಘಟಿಕೋತ್ಸವದಲ್ಲಿ ರಾಷ್ಟ್ರೀಯ ಬ್ಯಾಂಕ್ - ಹಣಕಾಸು ಮೂಲಸೌಕರ್ಯ ಮತ್ತು ಅಭಿವೃದ್ಧಿ (ಎನ್ಎಬಿಎಫ್ಐಡಿ) ಸಂಸ್ಥೆಯ ಹಾಗೂ ಜಿಯೋ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ನ ಅಧ್ಯಕ್ಷ ಕೆ.ವಿ. ಕಾಮತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನದ ಬಳಿಕ ಮಾತನಾಡಿದರು.
ಉಪಕುಲಪತಿ ಲೆ.ಜ. (ಡಾ) ಎಂ.ಡಿ. ವೆಂಕಟೇಶ್ ಅವರು ಕಾಮತ್ ಅವರಿಗೆ ಡಾಕ್ಟರೇಟ್ ಪ್ರದಾನಿಸಿ ಮಾತನಾಡಿ, ವಿದ್ಯಾರ್ಥಿಗಳಿಗೂ, ಪ್ರಾಧ್ಯಾಪಕರಿಗೂ ಸಹ ಅವರ ಸಾಧನೆ ಸ್ಫೂರ್ತಿದಾಯಕವಾಗಿದೆ. ಅವರ ಅನುಭವ ಭವಿಷ್ಯದ ನಾಯಕರನ್ನು ರೂಪಿಸಲು ಸಹಕಾರಿಯಾಗಿದೆ ಎಂದರು.
ಸಮಾರಂಭದಲ್ಲಿ ವಾಸಂತಿ ಆರ್ ಪೈ, ಡಾ ರಂಜನ್ ಆರ್. ಪೈ, ಡಾ. ದಿಲೀಪ್ ಜಿ. ನಾಯಕ್, ಡಾ. ಪಿ.ಗಿರಿಧರ್ ಕಿಣಿ ಮತ್ತು ಅಕಾಡೆಮಿಕ್ ಕೌನ್ಸಿಲ್ನ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನನ್ನ ವೃತ್ತಿ ಜೀವನದುದ್ದಕ್ಕೂ ನಾನು ಭಾರತದ ಸಂಸ್ಥೆಗಳನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವಂತೆ ಹಾಗೂ ಸುಸ್ಥಿರ ಅಭಿವೃದ್ಧಿ ಪ್ರತಿಪಾದಿಸಲು ಶ್ರಮಿಸಿದ್ದೇನೆ. ಮಾಹೆಯಂತಹ ಗೌರವಾನ್ವಿತ ಸಂಸ್ಥೆಯಿಂದ ಗುರುತಿಸಲ್ಪಟ್ಟಿದ್ದಲ್ಲದೆ, ಗೌರವ ಡಾಕ್ಟರೇಟ್ ಲಭಿಸಿರುವುದಕ್ಕೆ ಸಂತಸ ತಂದಿದೆ. ಈ ಮನ್ನಣೆ ನನಗಷ್ಟೇ ಅಲ್ಲ, ನನ್ನ ಪ್ರಯಾಣದಲ್ಲಿ ಸಹಕರಿಸಿದ ಎಲ್ಲರಿಗೂ ಸಲ್ಲುತ್ತದೆ. ಕೆ.ವಿ. ಕಾಮತ್. ಅಧ್ಯಕ್ಷ, ಎನ್ಎಬಿಎಫ್ಐಡಿ