ಕೊಳ್ಳೇಗಾಲ: ಅರ್ಥಶಾಸ್ತ್ರ ಪ್ರತಿಯೊಬ್ಬರ ಪ್ರತಿದಿನದ ಜೀವನಕ್ಕೆ ಬೆಸೆದುಕೊಂಡಿರುವ ಒಂದು ವಿಷಯ ಎಂದು ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ.ಚಾಮರಾಜು ಹೇಳಿದರು.
ಪಟ್ಟಣದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ಅರ್ಥಶಾಸ್ತ್ರ ವಿಭಾಗ ಹಾಗೂ ಐಕ್ಯುಎಸಿ ಸಹಯೋಗದಲ್ಲಿ ಕೌಟಿಲ್ಯ ಕೂಟದ ಉದ್ಘಾಟನೆ, ಪ್ರಥಮ ಪದವಿ ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ಹಾಗೂ ಪದವಿ ನಂತರದ ಉದ್ಯೋಗವಕಾಶಗಳ ಕುರಿತು ಆಯೋಜಿಸಿದ್ದ ವಿಶೇಷ ಮಾಹಿತಿ ಕಾರ್ಯಾಗಾರ ಮಾತನಾಡಿದರು.
ಅರ್ಥಶಾಸ್ತ್ರದ ಜ್ಞಾನ ಇಲ್ಲದೆ ಪ್ರತಿನಿತ್ಯ ಜೀವನ ನಡೆಸುವುದು ಅಸಾಧ್ಯ ವಿದ್ಯಾರ್ಥಿಗಳು ಅರ್ಥಶಾಸ್ತ್ರವನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಿದಾಗ ಯಶಸ್ಸು ಸಾಧ್ಯ, ಚಾಮರಾಜನಗರ ಬಹಳ ವಿಭಿನ್ನತೆ ಮತ್ತು ವಿಶಿಷ್ಟತೆಯಿಂದ ಕೂಡಿರುವ ಜಿಲ್ಲೆ. ಕಷ್ಟಪಟ್ಟರೆ ಇಲ್ಲಿನ ವಿದ್ಯಾರ್ಥಿಗಳು ಏನನ್ನಾದರೂ ಸಾಧಿಸಬಲ್ಲರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು (ಸ್ವಾಯತ್ತ) ಪ್ರಾಧ್ಯಾಪಕ ಹಾಗೂ ಕೊ ಆರ್ಡಿನೇಟರ್, ಅರ್ಥಶಾಸ್ತ್ರ ಸ್ನಾತಕೋತ್ತರ ಕೇಂದ್ರ ಮತ್ತು ಪರೀಕ್ಷಾ ನಿಯಂತ್ರಕ ಡಾ.ಕೆ.ಡಿ ಮುರಳಿಧರ ಅವರು ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸೇತುಬಂಧ(ಬ್ರಿಡ್ಜ್ ಕೋರ್ಸ್) ಬಗ್ಗೆ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ವಿಶೇಷವಾಗಿ 2024-25ನೇ ಸಾಲಿನ ಬಿಎ ಪದವಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಒಂಭತ್ತು ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಬಹುಮಾನ ಹಾಗೂ ಪುಸ್ತಕಗಳನ್ನು ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ಕುವೆಂಪು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಆರ್.ನಾಗಭೂಷಣ್, ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಪ್ರೊ. ಬಿ.ಜಯಲಕ್ಷ್ಮೀ, ಕಾಲೇಜಿನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಲ್.ಪ್ರೇಮಕುಮಾರಿ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಪ್ರೇಮಲತಾ, ಪ್ರೊ. ಸುಂದರ ಮೂರ್ತಿ, ಡಿ.ಮಹದೇವಯ್ಯ, ಡಾ.ವೇಣುಗೋಪಾಲ್ ಇತರರು ಇದ್ದರು.