ಮಹಾಲಿಂಗಪುರ: ರೈತಾಪಿ ಜನರು ಒಕ್ಕಲುತನದ ಜೊತೆಗೆ ಉಪ ಕಸುಬಾಗಿ ಹೈನುಗಾರಿಕೆಗಾಗಿ ದನಕರುಗಳನ್ನು ಸಾಕುವುದರಿಂದ ಆರ್ಥಿಕವಾಗಿ ಮಾತ್ರವಲ್ಲ ದೈಹಿಕವಾಗಿ ಸಬಲರಾಗುತ್ತಾರೆ ಎಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗಲಿಕರ ಹೇಳಿದರು.
ಪಟ್ಟಣದ ಗೋಕಾಕ ರಸ್ತೆಯಲ್ಲಿ ಶುಕ್ರವಾರ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಹೊಲಗದ್ದೆಗಳಲ್ಲಿಯ ಬೆಳೆದ ಹುಲ್ಲು ಅವುಗಳಿಗೆ ಆಹಾರವಾಗುವುದರಿಂದ ಜಮೀನು ಸ್ವಚ್ಛವಾಗುತ್ತವೆ. ಜಾನುವಾರುಗಳಿಗೆ ತಿಪ್ಪೆ ಗೊಬ್ಬರ ಸಿಗುತ್ತದೆ. ಇದರಿಂದ ಭೂಮಿಯ ಲವತ್ತತೆ ಹೆಚ್ಚಾಗುತ್ತದೆ ಎಂದರು.
ಜಿ.ಪಂ. ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಮನೆಯಲ್ಲಿ ಮಕ್ಕಳು ಇದ್ದರೆ ಯಾವ ವಾತಾವರಣ ಇರುತ್ತದೆಯೋ ತೋಟದಲ್ಲಿ ದನಕರುಗಳು ಇರುವುದರಿಂದ ಅಂತಹದೇ ವಾತಾವರಣ ಇರುತ್ತದೆ. ಇದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಮನಸ್ಸು ಶಾಂತವಾಗಿರುತ್ತದೆ. ಸನ್ 1947ರ ಸರ್ವೇ ಪ್ರಕಾರ ದೇಶದ ಜನಸಂಖ್ಯೆ 30 ರಿಂದ 35 ಕೋಟಿ ಇದ್ದರೆ ದನಕರುಗಳ ಸಂಖ್ಯೆ 130 ಕೋಟಿ ಇತ್ತು. ರೈತರಲ್ಲಿ ಹೈನುಗಾರಿಕೆ ಕುರಿತು ಆಸಕ್ತಿ ಹೆಚ್ಚುತ್ತಿದ್ದು ಒಳ್ಳೆಯ ಬೆಳವಣಿಗೆ. ಸಹಕಾರಿ ಸಂಘ ರೈತರ ಏಳಿಗೆಗಾಗಿ ಶ್ರಮಿಸುತ್ತಾ ತಾನು ಕೂಡಾ ಮಾದರಿಯಾಗಿ ಬೆಳೆಯಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಬಿ. ಮಾರಾಪೂರ ಸಾನ್ನಿಧ್ಯ ವಹಿಸಿದ್ದ ರನ್ನಬೆಳಗಲಿಯ ಸಿದ್ಧರಾಮ ಶಿವಯೋಗಿಗಳು ಮಾತನಾಡಿ ರಬಕವಿ- ಬನಹಟ್ಟಿ ತಾಲೂಕಿನಲ್ಲಿ ಪ್ರತಿದಿನ 43 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು ದಿನದ ವಹಿವಾಟು 16 ಲಕ್ಷ 34 ಸಾವಿರದಷ್ಟಾಗಿದೆ. ವಾರ್ಷಿಕ ಸುಮಾರು 60 ಕೋಟಿ ರೂ. ಗಳಷ್ಟು ವಹಿವಾಟು ಆಗುತ್ತದೆ. 5 ಸಾವಿರ ವರ್ಷಗಳ ಹಿಂದೆ ಯಾರ ಆಶ್ರಮದಲ್ಲಿ ಹೆಚ್ಚು ಗೋವುಗಳು ಇರುತ್ತದ್ದವೋ ಅವರಿಗೆ ಸಾಹುಕಾರ ಎನ್ನುತ್ತಿದ್ದರು ಎಂದರು.
ಕೆವಿಜಿ ಬ್ಯಾಂಕ್ ಮಾಜಿ ವ್ಯವಸ್ಥಾಪಕ ಎಲ್.ಬಿ. ಪಾಟೀಲ ಮಾತನಾಡಿದರು.
ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಕಾಂಗ್ರೆಸ್ ಧುರೀಣೆ ಕವಿತಾ ಕೊಣ್ಣೂರ, ಬಿಡಿಸಿಸಿ ನಿರ್ದೇಶಕ ಬಸನಗೌಡ ಪಾಟೀಲ, ಮಾಜಿ ನಿರ್ದೇಶಕ ಭೀಮಶಿ ಮಗದುಮ್, ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶೇಖರ ಅಂಗಡಿ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಅರ್ಬನ್ ಬ್ಯಾಂಕ್ ನಿರ್ದೇಶಕ ಶ್ರೀಶೈಲ ಹಿಪ್ಪರಗಿ, ಎಸ್.ಎಂ. ಗುಣಕಿ, ಪುಂಡಲೀಕ ವನ್ನೂರ, ಈರಣ್ಣ ಬುದ್ನಿ ವೇದಿಕೆ ಮೇಲಿದ್ದರು.
ಸಂಘದ ಉಪಾಧ್ಯಕ್ಷೆ ರೇಣುಕಾ ಶೇಷಗಿರಿ, ಸದಸ್ಯರಾದ ಮುತ್ತಪ್ಪ ಪಶ್ಚಾಪೂರ, ಶಿವಲಿಂಗಪ್ಪ ವಾಲಿ, ಅಶೋಕ ಹವಾಲದಾರ, ಅಲ್ಲಪ್ಪ ಪಾಟೀಲ, ನಿಂಗಪ್ಪ ಬಾಳಿಕಾಯಿ, ಬಸಪ್ಪ ಇಟ್ನಾಳ, ವಿಠ್ಠಲ ಕರಿಗಾರ, ಪ್ರಭಾವತಿ ಮಾರಾಪೂರ, ಸಿದ್ದಪ್ಪ ಚಿಚಖಂಡಿ ಉಪಸ್ಥಿತರಿದ್ದರು.