ಆರ್.ತುಳಸಿಕುಮಾರ್
ಬೆಂಗಳೂರು: ಬಿಬಿಎಂಪಿಯನ್ನು ವಿಭಜಿಸಿ ಹೊಸದಾಗಿ ಐದು ಪಾಲಿಕೆಗಳನ್ನಾಗಿ ರಚಿಸಿರುವ ಸರ್ಕಾರದ ನಡೆಯಿಂದಾಗಿ ಕಾರ್ಪೊರೇಷನ್‌ಗಳ ಮಧ್ಯೆ ಆರ್ಥಿಕ ಅಸಮಾನತೆಗೆ ದಾರಿಮಾಡಿಕೊಡಲಿದ್ದು, ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಜಿಜ್ಞಾಸೆ ಮೂಡಿದೆ.
ಕರಡು ಅಧಿಸೂಚನೆಯಂತೆ ಐದು ಪಾಲಿಕೆಗಳನ್ನು ನಗರದ ಭೌಗೋಳಿಕತೆಯನ್ನು ಆಧರಿಸಿ ರಚಿಸಲಾಗಿದೆ. ಜತೆಗೆ ದೊಡ್ಡ ವಿಧಾನಸಭಾ ಕ್ಷೇತ್ರಗಳನ್ನು ಜನಸಂಖ್ಯೆ ಹಾಗೂ ಪಾಲಿಕೆ ಪ್ರದೇಶಗಳ ವಿಸ್ತೀರ್ಣವನ್ನು ಸಮತೋಲನ ಮಾಡುವ ಕಸರತ್ತು ನಡೆಸಲಾಗಿದೆ. ಆದರೆ, ಕಾರ್ಪೊರೇಷನ್ ರಚನೆಗೊಂಡು ಹೊಸ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ನಂತರ ಅವುಗಳ ಆದಾಯ ಹಾಗೂ ಆರ್ಥಿಕ ಸಂಪನ್ಮೂಲಗಳ ಮೂಲವೇ ಯಶಸ್ಸಿಗೆ ಅಳತೆಗೋಲಾಗಲಿದೆ. ಈ ವಿಷಯದಲ್ಲಿ ಅಧಿಕಾರಿಗಳು ಹಾಗೂ ನಗರ ತಜ್ಞರನ್ನು ಒಳಗೊಂಡಿರುವ ಸಮಿತಿಯು ಪೂರ್ಣಪ್ರಮಾಣದಲ್ಲಿ ಲಕ್ಷ್ಯ ವಹಿಸಿಲ್ಲ. ಬದಲಾಗಿ 5 ಪಾಲಿಕೆಗಳನ್ನಾಗಿ ವಿಭಜಿಸಲಷ್ಟೇ ಕೇಂದ್ರೀಕರಿಸಿರುವ ಪರಿಣಾಮ ಭವಿಷ್ಯದಲ್ಲಿ ಉದ್ಭವಿಸುವ ಹಣಕಾಸು ಸಮಸ್ಯೆಗೆ ಸರ್ಕಾರ ಉತ್ತರದಾಯತ್ವ ವಹಿಸಿಕೊಳ್ಳಬೇಕಾಗುತ್ತದೆ ಎಂದು ಪರಿಣಿತರು ಎಚ್ಚರಿಸಿದ್ದಾರೆ.
ಪ್ರಸ್ತುತ ಬಿಬಿಎಂಪಿಯ ಆದಾಯ ಮೂಲ ಆಸ್ತಿತೆರಿಗೆ ಆಗಿದ್ದು, 2024-25ನೇ ಸಾಲಿನಲ್ಲಿ 5 ಸಾವಿರ ಕೋಟಿ ರೂ. ಸಂಗ್ರಹಿಸಲಾಗಿದೆ. ಈ ಮೊತ್ತದಲ್ಲಿ ಒಂದು ಬಾರಿ ಇತ್ಯರ್ಥ ಯೋಜನೆ (ಒಟಿಎಸ್) ಅಡಿಯಲ್ಲಿ 1,100 ಕೋಟಿ ರೂ. ಬಂದಿದೆ. ಅಂದರೆ ಆಸ್ತಿತೆರಿಗೆ ಮೂಲ 4 ಸಾವಿರ ಕೋಟಿ ರೂ. ಆಸುಪಾಸು ಇರಲಿದೆ. ಜಾಹೀರಾತು ಶುಲ್ಕ, ಕೇಬಲ್/ಒಎಫ್ಸಿ ಶುಲ್ಕ ಹಾಗೂ ಎಫ್ಆರ್ಎನಿಂದ ತಲಾ 1 ಸಾವಿರ ಕೋಟಿ ರೂ. ವಸೂಲಾಗುತ್ತಿದೆ. ಒಟ್ಟು 6 ಸಾವಿರ ಕೋಟಿ ರೂ. ಮೊತ್ತದಲ್ಲಿ 5 ಪಾಲಿಕೆಗಳಲ್ಲಿ ಹಂಚಿಹೋದಲ್ಲಿ ತಲಾ 1 ಸಾವಿರ ಕೋಟಿ ರೂ. ಸಿಗಬಹುದು. ನೂತನ ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ಐಟಿ-ಬಿಟಿ ಕಂಪನಿಗಳು ಅಧಿಕ ಸಂಖ್ಯೆಯಲ್ಲಿರುವ ಕಾರಣ ಆಸ್ತಿತೆರಿಗೆ ಹೆಚ್ಚು ವಸೂಲಾಗುತ್ತಿದೆ. ದಕ್ಷಿಣ ಪಾಲಿಕೆಯಲ್ಲಿ ಅಪಾರ್ಟ್‌ಮೆಂಟ್‌ಗಳಿಂದ ಹಾಗೂ ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ವಾಣಿಜ್ಯ ಸ್ವತ್ತುಗಳೇ ಆಧಾರವಾಗಲಿದೆ. ಉತ್ತರ ಹಾಗೂ ಪಶ್ಚಿಮ ವಲಯಗಳಲ್ಲಿ ಕಡಿಮೆ ತೆರಿಗೆ ವಸೂಲಾಗಿ, ಆರ್ಥಿಕ ಕೊರತೆಗೆ ದಾರಿಮಾಡಿಕೊಡುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ನಡೆದಿದೆ.
ಸರ್ಕಾರದ ಮೇಲೆ ಅವಲಂಬನೆಗೆ ದಾರಿ:
ಬೆಂಗಳೂರು ನಗರವು ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು, ಇದಕ್ಕೆ ತಕ್ಕಂತೆ ಮೂಲಸೌಕರ್ಯ ಹೊಂದಿಸಬೇಕಿದೆ. ಜತೆಗೆ ಹೊಸ ಪಾಲಿಕೆಗಳಲ್ಲಿ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕಾಗುತ್ತದೆ. ಇದಕ್ಕೆ ಸಂಪನ್ಮೂಲ ಕ್ರೋಡೀಕರಣಕ್ಕೆ ಸವಾಲು ಎದುರಾಗಲಿದೆ. ನಿರೀಕ್ಷಿಸಿದಷ್ಟು ಆದಾಯ ಉತ್ಪತ್ತಿ ಆಗದಿದ್ದಲ್ಲಿ ಯಥಾಪ್ರಕಾರ ಸಾಲದ ಮೇಲೆ ಅವಲಂಬನೆ ಹೆಚ್ಚುತ್ತದೆ. ಜತೆಗೆ ರಾಜ್ಯ ಸರ್ಕಾರ ಕಡಿಮೆ ಆದಾಯವುಳ್ಳ ಪಾಲಿಕೆಗಳಿಗೆ ಹೆಚ್ಚಿನ ಅನುದಾನ ನೀಡುವುದು ಅನಿವಾರ್ಯವಾಗುತ್ತದೆ.
ದಶಕದ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯನ್ನು ಮೂರು ಪಾಲಿಕೆಗಳನ್ನಾಗಿ ವಿಭಜಿಸಿದಾಗ ಹೊಸ ಕಾರ್ಪೊರೇಷನ್‌ಗಳಿಗೆ ಹಣದ ಕೊರತೆ ಕಾಡಿತ್ತು. ನಂತರದಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಕಷ್ಟವಾದ ಕಾರಣ ಮತ್ತೆ ಒಂದೇ ಪಾಲಿಕೆಯನ್ನಾಗಿ ಪುನಾರಚಿಸಲಾಯಿತು. ಇಂತಹದ್ದೇ ಅನುಭವ ಬಿಬಿಎಂಪಿಯನ್ನು 5 ಪಾಲಿಕೆಗಳಾಗಿ ಹೋಳು ಮಾಡಿ ಕೈಸುಟ್ಟುಕೊಳ್ಳುವ ಬದಲು ಕಾರ್ಪೊರೇಷನ್‌ಗಳನ್ನು ಆರ್ಥಿಕವಾಗಿ ಸದೃಢಗೊಳಿಸುವ ರೀತಿ ಒಂದಿಷ್ಟು ಉಪಕ್ರಮ ಕೈಗೊಳ್ಳಬೇಕಿದೆ ಎಂದು ಮಾಜಿ ಕಾರ್ಪೊರೇಟರ್‌ಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹೊಸ ಪಾಲಿಕೆಗಳ ವಿಸ್ತೀರ್ಣ, ಜನಸಂಖ್ಯೆ ವಿವರ:
ಪಾಲಿಕೆ ಹೆಸರು ವಿಸ್ತೀರ್ಣ ಜನಸಂಖ್ಯೆ (2023)
ಬೆಂ. ಉತ್ತರ 158 ಚ.ಕಿ.ಮೀ. 31 ಲಕ್ಷ
ಬೆಂ. ದಕ್ಷಿಣ 147 ಚ.ಕಿ.ಮೀ. 30 ಲಕ್ಷ
ಬೆಂ. ಪೂರ್ವ 168 ಚ.ಕಿ.ಮೀ. 13 ಲಕ್ಷ
ಬೆಂ. ಪಶ್ಚಿಮ 161 ಚ.ಕಿ.ಮೀ. 45 ಲಕ್ಷ
ಬೆಂ. ಕೇಂದ್ರ 78 ಚ.ಕಿ.ಮೀ. 25 ಲಕ್ಷ
ಕೇಂದ್ರ ಪಾಲಿಕೆ ವಿಸ್ತೀರ್ಣ ಹೆಚ್ಚಿಸಲಿ:
ಹೊಸದಾಗಿ ರಚಿಸಿರುವ 5 ಪಾಲಿಕೆಗಳ ಪೈಕಿ ಕೇಂದ್ರ ಕಾರ್ಪೊರೇಷನ್ ಕಡಿಮೆ ವಿಸ್ತೀರ್ಣ (78 ಚದರ ಕಿ.ಮೀ.) ಹೊಂದಿದೆ. ಇದರಿಂದ ಕಡಿಮೆ ಆದಾಯ ಸಂಪನ್ಮೂಲ ಸಂಗ್ರವಾಗಲಿದೆ. ಹಾಲಿ ಬಿಬಿಎಂಪಿ ವ್ಯಾಪ್ತಿಯ ನಗರ ವ್ಯಾಪಾರ ಜಿಲ್ಲೆ (ಸಿಬಿಡಿ)ಯ ಪ್ರದೇಶ ಸೇರ್ಪಡೆಗೆ ಸೀಮಿತಗೊಳಿಸಲಾಗಿದೆ. ಇತರ ಪಾಲಿಕೆಗಳಂತೆ ವಿಸ್ತೀರ್ಣ ಹಾಗೂ ತೆರಿಗೆ ಸಂಗ್ರಹ ಹೆಚ್ಚಿಸಲು ದಕ್ಷಿಣ ಪಾಲಿಕೆಯಲ್ಲಿರುವ ಬಿಟಿಎಂ ಲೇಔಟ್ ಕ್ಷೇತ್ರವನ್ನು ಸೆಂಟ್ರಲ್ ಕಾರ್ಪೊರೇಷನ್ ವ್ಯಾಪ್ತಿಗೆ ಸೇರಿಸಬೇಕು. ಇದೇ ರೀತಿ ಪಶ್ಚಿಮ ವಲಯದಲ್ಲಿ ಹಂಚಿಹೋಗಿರುವ ಪದ್ಮನಾಭನಗರ ಕ್ಷೇತ್ರವನ್ನು ಪೂರ್ಣವಾಗಿ ದಕ್ಷಿಣ ವಲಯಕ್ಕೆ ಸೇರಿಸಿದರೆ ಸ್ವಲ್ಪಮಟ್ಟಿಗೆ ಸಮಾನತೆ ತರಬಹುದು ಎಂಬ ಸಲಹೆ ವ್ಯಕ್ತವಾಗಿದೆ.
ಬಿಬಿಎಂಪಿ ತೆರಿಗೆ ಸಂಗ್ರಹ ವಿವರ:
ಆರ್ಥಿಕ ವರ್ಷ ವಸೂಲಿ (ಕೋಟಿ ರೂ.ಗಳಲ್ಲಿ)
2021-22 3,033
2022-23 3,758
2023-24 3,920
2024-25 4,930
2025-26 6,000 (ಅಂದಾಜು)
ಸರ್ಕಾರವು ರಚಿಸಿರುವ 5 ಪಾಲಿಕೆಗಳಿಗೆ ವಾರ್ಷಿಕ ಆಸ್ತಿತೆರಿಗೆ ಸಂಗ್ರಹದ ತಲಾ ಆದಾಯವು ಭಾರಿ ವ್ಯತ್ಯಸ ಕಂಡುಬಂದಿದೆ. ಪೂರ್ವ ಪಾಲಿಕೆ ಆರ್ಥಿಕವಾಗಿ ಶ್ರೀಮಂತ ಎನಿಸಿಕೊಂಡರೆ ಕೇಂದ್ರ ಪಾಲಿಕೆಯು ಆರ್ಥಿಕವಾಗಿ ಸಂಕಷ್ಟಕ್ಕೀಡಾಗುವ ಸಾಧ್ಯತೆ ಹೆಚ್ಚಿದೆ. ಇದು ಪಾಲಿಕೆಗಳ ಮಧ್ಯೆ ದೊಡ್ಡ ಆರ್ಥಿಕ ಅಸಮತೋಲನಕ್ಕೆ ಕಾರಣವಾಗಲಿದೆ. ಹಾಗಾಗಿ ಬಿಬಿಎಂಪಿಯನ್ನು ವಲಯಗಳನ್ನಾಗಿ ವಿಭಜಿಸಿ ಪ್ರತಿಯೊಂದಕ್ಕೂ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿ ನೇಮಿಸಿ ಅಧಿಕಾರ ವಿಕೇಂದ್ರೀಕರಣ ಮಾಡಲಿ.
- ಎನ್.ಆರ್.ರಮೇಶ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ
ಒಂದಕ್ಕಿಂತ ಹೆಚ್ಚು ಪಾಲಿಕೆಗಳಿಗೆ ಅಸೆಂಬ್ಲಿ ಕ್ಷೇತ್ರಗಳು ಹಂಚಿಹೋದಲ್ಲಿ ಜನರು ಎಂಎಲ್‌ಎ ಸಂಪರ್ಕಿಸಲು ಸಮಸ್ಯೆಯಾಗಲಿದೆ. ಆದಾಯ ಕೊರತೆಯಾದಲ್ಲಿ ಸರ್ಕಾರದಿಂದ ಭರಿಸುವ ವಾಗ್ದಾನದ ಬಗ್ಗೆ ಕಾಯ್ದೆಯಲ್ಲಿ ಸ್ಪಷ್ಟತೆ ಇಲ್ಲ. ಇಂತಹ ತಪ್ಪುಗಳು ದಿಲ್ಲಿ ಪಾಲಿಕೆಯನ್ನು ಮೂರಾಗಿ ವಿಭಜಿಸಿದಾಗ ಸಮಸ್ಯೆ ಉದ್ಭವಿಸಿತ್ತು. ನಂತರ ಅಭಿವೃದ್ಧಿ ಆಗಿಲ್ಲವೆಂದು ಮತ್ತೆ ಒಂದೇ ಪಾಲಿಕೆಯನ್ನು ಮಾಡಲಾಯಿತು. ಇದರ ಪಾಠವನ್ನು ನಮ್ಮ ಸರ್ಕಾರ ಕಲಿತಂತಿಲ್ಲ. ಜಿಬಿಎ ಬದಲು ಒಂದೇ ಪಾಲಿಕೆಯಡಿ ವಲಯವಾರು ಕೌನ್ಸಿಲ್ ಪದ್ಧತಿ ಸೂಕ್ತ.
- ಕಾತ್ಯಾಯಿನಿ ಚಾಮರಾಜ್, ಸಾಮಾಜಿಕ ಕಾರ್ಯಕರ್ತೆ