ಎ.ಎಸ್.ಪಾಟೀಲ ನಡಹಳ್ಳಿ  
ಜಿಲ್ಲೆ

ಮಾಜಿ ಪ್ರಧಾನಿ ಮನಮೋಹನಸಿಂಗ್ ಆರ್ಥಿಕ ಸ್ವಾತಂತ್ರೃದ ಹರಿಕಾರ

ಮುದ್ದೇಬಿಹಾಳ: ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರು 21ನೇ ಶತಮಾನದ ನವಭಾರತದ ಆರ್ಥಿಕ ಸ್ವಾತಂತ್ರೃದ ನಿಜವಾದ ಹರಿಕಾರರಾಗಿದ್ದಾರೆ. 1991ರಲ್ಲಿ ಅವರು ತಂದ ಬದಲಾವಣೆಗಳು 2000ನೇ ಇಸ್ವಿಯ ವಾಜಪೇಯಿ ಸರ್ಕಾರದಲ್ಲಿ ಕಾಣತೊಡಗಿದ್ದವು ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಮನಮೋಹನಸಿಂಗ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ನಮ್ಮ ದೇಶ ವಿಶ್ವದ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿರಲು ಆರ್ಥಿಕ ಸ್ವಾತಂತ್ರೃದ ಮೊದಲನೇ ಕಲ್ಲು ನೆಟ್ಟು ಬುನಾದಿ ಹಾಕಿದವರೇ ಮನಮೋಹನಸಿಂಗ್ ಅವರಾಗಿದ್ದಾರೆ ಎಂದರು.

ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ವಿತ್ತ ಸಚಿವರಾಗಿ ಮೊದಲ ಬಾರಿಗೆ ದೇಶಕ್ಕೆ ನಿಜವಾದ ಆರ್ಥಿಕ ಸ್ವಾತಂತ್ರ್ಯ ತಂದುಕೊಟ್ಟರು. ವಿಕೇಂದ್ರೀಕರಣ ನೀತಿ ಜಾರಿಗೊಳಿಸಿ, ಲೈಸೆನ್ಸ್ ದೇಶದ ಹಣೆಪಟ್ಟಿ ಕಳಚಿ ಹಾಕಿ ಖಾಸಗಿ ವಲಯದ ಆರ್ಥಿಕ ಬೆಳವಣಿಗೆಗೆ ಮುಕ್ತ ಅವಕಾಶ ಕೊಟ್ಟರು. ಅಂತರಾತ್ಮದಿಂದಲೇ ಪ್ರಾಮಾಣಿಕರಾಗಿದ್ದ ಅವರು ಸರಳತೆ ಮೈಗೂಡಿಸಿಕೊಂಡಿದ್ದರು.

ಒಂದು ವೇಳೆ ಕಾಂಗ್ರೆಸ್ ಪಕ್ಷದ ನಾಯಕತ್ವವು ಮನಮೋಹನ್‌ಸಿಂಗ್ ಅವರಿಗೆ ಸಂಪೂರ್ಣವಾಗಿ ಆಡಳಿತಾತ್ಮಕ ಸ್ವಾತಂತ್ರೃ ಕೊಟ್ಟಿದ್ದರೆ ಆಡಳಿತ ಇನ್ನೂ ಉತ್ತಮವಾಗಿರುತ್ತಿತ್ತು. ಇವರ ಶಕ್ತಿ, ಸಾಮರ್ಥ್ಯವನ್ನು ಅವರು ಸಂಪೂರ್ಣವಾಗಿ ಬಳಸಿಕೊಳ್ಳಲಿಲ್ಲ. ಕಾಂಗ್ರೆಸ್ ಯುವನಾಯಕ ರಾಹುಲ್‌ಗಾಂಧಿ ಅವರು ಮನಮೋಹನಸಿಂಗ್ ಅವರ ಕ್ಯಾಬಿನೆಟ್ ನಿರ್ಣಯದ ಪ್ರತಿಯನ್ನು ಸಾರ್ವಜನಿಕವಾಗಿ ಹರಿದು ಹಾಕಿದ್ದು ಅವರಿಗೆ ಬಹಳಷ್ಟು ನೋವು ಕೊಟ್ಟ ಸಂಗತಿಯಾಗಿತ್ತು. ಆ ಸಂದರ್ಭ ಮನಮೋಹನಸಿಂಗ್ ಅವರ ಮನಸ್ಸು ಎಷ್ಟು ನೊಂದುಕೊಂಡಿತ್ತು ಅನ್ನೋದು ಚಿಂತನೆಗೆ ಹಚ್ಚುವಂಥದ್ದು ಎಂದು ನಡಹಳ್ಳಿ ಹೇಳಿದರು.