ಪೊನ್ನಂಪೇಟೆ ಸಿಐಟಿ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕೃಷಿ ಯಂತ್ರ ಮೇಳದ ಮಳಿಗೆಗಳನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ಸಚಿವ ಚಲುವರಾಯಸ್ವಾಮಿ ಮತ್ತಿತರರು ಇದ್ದರು. 
ಜಿಲ್ಲೆ

ವೈಜ್ಞಾನಿಕ ಕೃಷಿಯಿಂದ ರೈತರ ಆರ್ಥಿಕತೆ ವೃದ್ಧಿ

ಗೋಣಿಕೊಪ್ಪ: ವೈಜ್ಞಾನಿಕ ಕೃಷಿ, ಸಮರ್ಪಕ ಯಾಂತ್ರೀಕರಣ , ಸಮಗ್ರ ಬೇಸಾಯ ಪದ್ಧತಿ ಅಳವಡಿಕೆ ರೈತರ ಆರ್ಥಿಕತೆ ಹೆಚ್ಚಿಸಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಪೊನ್ನಂಪೇಟೆಯ ಕೂರ್ಗ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಏರ್ಪಡಿಸಿರುವ ಮೂರು ದಿನಗಳ ಕೃಷಿ ಯಂತ್ರ ಮೇಳವನ್ನು ಶುಕ್ರವಾರ ತೆಂಗಿನ ಹಿಂಗಾರವನ್ನು ಅರಳಿಸಿ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರು, ಕೃಷಿಕರ ಶ್ರೇಯೋಭಿವೃದ್ಧಿ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದರು.

ಸರ್ಕಾರ ಕೃಷಿಕರ ಅನುಕೂಲಕ್ಕಾಗಿ 600ಕ್ಕೂ ಹೆಚ್ಚು ಯಂತ್ರಧಾರೆ ಕೇಂದ್ರಗಳನ್ನು ತೆರೆದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆ ಜಾರಿಗೆ ತರಲಾಗುತ್ತಿದೆ. ರಾಜ್ಯದಲ್ಲಿ ಹೈಟೆಕ್ ಕಟಾವು ಹಬ್ ಸ್ಥಾಪನೆಗೆ 50 ಕೋಟಿ ರೂ. ಮೀಸಲಿರಿಸಲಾಗಿದ್ದು 70:30ರ ಸಹಾಯಧನ- ಬಂಡವಾಳ ಹೂಡಿಕೆ ಅನುಪಾತದಲ್ಲಿ ರೈತರೇ ಇದನ್ನು ಸ್ಥಾಪಿಸಿ ನಡೆಸಬಹುದಾಗಿದೆ ಎಂದು ಹೇಳಿದರು.

ಕೂರ್ಗ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ವತಿಯಿಂದ ಖಾಸಗಿಯಾಗಿ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ತಾಂತ್ರಿಕ ಶಿಕ್ಷಣ ನಿಡುತ್ತಿರುವುದು ಹಾಗೂ ಕೃಷಿಗೆ ಪೂರಕವಾದ ಯಂತ್ರ ಮೇಳವನ್ನು ಆಯೋಜಿಸಿರುವುದು ಅಭಿನಂದನಾರ್ಹ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾವೇರಿ, ನಮ್ಮ ನಾಡಿನ ಜೀವನದಿ. ಕೊಡಗಿನಲ್ಲಿ ಹುಟ್ಟಿ ರಾಜ್ಯದ ಕೋಟ್ಯಂತರ ಜನರ ಜೀವನಾಧಾರವಾಗಿ ಹರಿಯುತ್ತಿದೆ. ಈ ಬಾರಿ ಬರ ಪರಿಸ್ಥಿತಿ ತಲೆದೋರಿದ್ದು ನೀರಿನ ಹಂಚಿಕೆ ಸಮಸ್ಯೆಯೂ ಉದ್ಭವವಾಗಿದೆ. ಕೇಂದ್ರಕ್ಕೆ ಬೆಳೆ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರ ರೈತರ ಹಿತ ಕಾಯಲು ಬದ್ಧವಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ಕೊಡಗು ವಿಭಿನ್ನ ಸಂಸ್ಕೃತಿ, ಸುಂದರ ಪ್ರಕೃತಿ ಹೊಂದಿರುವ ವೀರರ ನಾಡು. ಇಲ್ಲಿಗೆ ಭೇಟಿ ನೀಡುವುದೇ ಒಂದು ಸಂತಸ ಎಂದು ಅಭಿಮಾನದ ನುಡಿಗಳನ್ನಾಡಿದರು.

ರಾಜ್ಯದಲ್ಲಿ ನೂತನ ಸರ್ಕಾರದ ಬಂದು ನಾಲ್ಕು ತಿಂಗಳಲ್ಲಿ ನಾವು ನೀಡಿದ ಭರವಸೆ ಈಡೇರಿಸಿದ್ದೇವೆ. ನುಡಿದಂತೆ ನಡೆದಿದ್ದು ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ.ರೈತರಿಗೆ 5 ಲಕ್ಷ ರೂ.ಗಳವರಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳಿಗೂ ಆರ್ಥಿಕ ನೆರವು ಒದಗಿಸಲಾಗುತ್ತಿದೆ ಎಂದು ಹೇಳಿದರು.

ಗೃಹಲಕ್ಷ್ಮೀ ಯೋಜನೆ ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಬೇಕಿದೆ. ಹಾಗಾಗಿ ಪ್ರತಿ ಮನೆಯ ಸಮೀಕ್ಷೆ ನಡೆಸಿ ಬಿಟ್ಟು ಹೋದವರನ್ನು ಗುರುತಿಸಿ ಸೌಲಭ್ಯ ಒದಗಿಸಲು ಎಲ್ಲ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚನೆ ನೀಡಲಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಮುಖ್ಯಮಂತ್ರಿ ಕಾನೂನು ಸಲಹೆಗಾರಾದ ಎ.ಎಸ್.ಪೊನಣ್ಣ ಅವರ ವ್ಯಕ್ತಿತ್ವ, ಜನಪರ ಕಾಳಜಿ ಬಗ್ಗೆ ಸಚಿವರು ಶ್ಲಾಘಿಸಿದರು.

ಶಾಸಕ ಎ.ಎಸ್ ಪೊನ್ನಣ್ಣ ಮಾತನಾಡಿ, ದೇಶದ ಶೇ.75 ರಷ್ಟು ಜನ ಕೃಷಿಯನ್ನೇ ಅವಲಂಭಿಸಿದ್ದಾರೆ. ಅವರೇ ನಮ್ಮ ದೇಶದ ಬೆನ್ನೆಲುಬು. ಕೃಷಿಕರ ಭವಿಷ್ಯ ಉಜ್ವಲವಾಗಿದೆ. ಕೃಷಿಕರು ಇಲ್ಲದಿದ್ದರೆ ಪ್ರಪಂಚವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮ ಸರ್ಕಾರ ಎಂದೆಂದಿಗೂ ರೈತರ ಪರವಾಗಿ ನಿಂತಿದೆ. ರೈತನ ಮಗನೇ ಕೃಷಿ ಸಚಿವರಾದ್ದರಿಂದ ರೈತರ ಕಷ್ಟ ಅವರಿಗೆ ಅರಿವಾಗುತ್ತದೆ. ಹಾಗಾಗಿ ಸದಾಕಾಲ ಸ್ಪಂದಿಸುವ ಸರ್ಕಾರ ಮತ್ತು ಸಚಿವರು ನಮ್ಮೊಂದಿಗೆ ಇದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ.ಎಂ.ಸಿ ಕಾರ್ಯಪ್ಪ ವಹಿಸಿದ್ದರು. ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲೀಲಾವತಿ, ಕೊಡವ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷ ಕೆ.ಎ.ಚಿನ್ನಪ್ಪ, ಕೋಶಾಧಿಕಾರಿ ಕೆ.ಎನ್.ಉತ್ತಪ್ಪ, ಕೃಷಿ ಯಂತ್ರ ಮೇಳದ ಸಂಚಾಲಕ ಡಾ.ಬಿ.ಬಿ.ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ತಿತಿಮತಿ ಆನೇಚೌಕೂರು ಗೇಟ್ ಬಳಿ ಅಧಿಕಾರಿಗಳು ಸಚಿವರನ್ನು ಬರಮಾಡಿಕೊಂಡರು. ತಿತಿಮತಿಯಲ್ಲಿ ಪಕ್ಷದ ಪ್ರಮುಖರು ಸಚಿವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಪೊನ್ನಂಪೇಟೆ ತಾಲೂಕು ಕಚೇರಿ ಬಳಿ ಶಾಸಕ ಎ.ಎಸ್.ಪೊನ್ನಣ್ಣ ಸಚಿವರನ್ನು ಬರಮಾಡಿಕೊಂಡರು.

ಪೊನ್ನಂಪೇಟೆ ಸಿಐಟಿ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕೃಷಿ ಯಂತ್ರ ಮೇಳವನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ಶಾಸಕ ಎ.ಎಸ್ ಪೊನ್ನಣ್ಣ, ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ.ಎಂ.ಸಿ. ಕಾರ್ಯಪ್ಪ, ಸಿಇಒ ವರ್ಣಿತ್ ನೇಗಿ ಮತ್ತಿತರರು ಇದ್ದರು.