ಜಿಲ್ಲೆ

ಸ್ವ ಸಹಾಯ ಸಂಘಗಳಿಂದ ಆರ್ಥಿಕ ಬಲವರ್ಧನೆ

ಕಡೂರು: ಮಹಿಳೆಯರ ಆರ್ಥಿಕ ಬಲವರ್ಧನೆಗೆ ಸ್ವ ಸಹಾಯ ಸಂಘಗಳು ಸಹಕಾರಿಯಾಗಲಿವೆ ಎಂದು ಯಳ್ಳಂಬಳಸೆ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ಹೇಳಿದರು.
ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ನಡೆದ ಸಂಜೀವಿನಿ ಒಕ್ಕೂಟದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಂಘ ಗ್ರಾಮೀಣ ಭಾಗದಲ್ಲಿ ಹೆಚ್ಚು ಬಲವರ್ಧನೆಗೊಳ್ಳುತ್ತಿದೆ. ಜತೆಯಲ್ಲಿ ಒಗ್ಗಟ್ಟಿನೊಂದಿಗೆ ತಮ್ಮ ದುಡಿಮೆಯ ಒಂದು ಭಾಗದಲ್ಲಿ ಸಂಘದ ಬೆಳವಣಿಗೆಗೆ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ತಾಲೂಕು ಮೇಲ್ವಿಚಾರಕ ಲೋಕೇಶ್ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ 2011ರಲ್ಲಿ ಕೆಲವು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಸಂಘಗಳನ್ನು ರಚಿಸಿದೆ. ಸಂಜೀವಿನ ಒಕ್ಕೂಟದ ಸಂಘದಿಂದ ಮಹಿಳೆಯರಿಗೆ ಮರುಜೀವನ ನೀಡಿದಂತಾಗಿದೆ. ಬಡತನ ತೀವ್ರತೆ ಕಡಿಮೆ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ದುಡಿಮೆ ಹೆಚ್ಚಿಸಲು ಸಂಘ ವರದಾನವಾಗಿದೆ ಎಂದರು.
ಒಕ್ಕೂಟದ ಅಧ್ಯಕ್ಷೆ ಸಾಹೇರಾ ಬಾನು ಮಾತನಾಡಿ, ಸ್ವಸಹಾಯ ಸಂಘಗಳಲ್ಲಿ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ ಗ್ರಾಮಗಳಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಮಾರಾಟ ಮಾಡುವುದರಿಂದ ಆದಾಯ ವೃದ್ಧಿಸಿಕೊಳ್ಳಬೇಕು. ಇದರಿಂದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬಹುದು. ಸಂಘಗಳಿಗೆ ನೀಡಿದ 15ಲಕ್ಷ ರೂ ಸಾಲ ಮರುಪಾವತಿಯಾಗಿರುತ್ತದೆ ಎಂದರು. ಜಿಲ್ಲಾ ವ್ಯವಸ್ಥಾಪಕ ಮಂಜೇಗೌಡ, ರಂಜಿತಾ, ಗ್ರಾಪಂ ಸದಸ್ಯರಾದ ಸೈಯಾದ್ ಯಾಸೀನ್, ನವೀನ್‌ಕುಮಾರ್, ಚೈತ್ರ ರವಿಕುಮಾರ್ ಮತ್ತಿತರಿದ್ದರು.