ಜಿಲ್ಲೆ

ರೈತರಿಗೆ ಆರ್ಥಿಕ ಬಲತುಂಬಿದ ಹೈನುಗಾರಿಕೆ

ಪಂಚನಹಳ್ಳಿ: ರೈತರು ದೇಶದ ಬೆನ್ನೆಲುಬಾದರೆ ಗ್ರಾಮೀಣ ಭಾಗದಲ್ಲಿ ರೈತರಿಗೆ ಹೈನುಗಾರಿಕೆ ಬೆನ್ನೆಲುಬಾಗಿ ನಿಂತಿದೆ ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಟಿ.ಕೆ.ಜಗದೀಶ್ ತಿಳಿಸಿದರು.
ಮುತ್ತಾಣೆಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ತೀವ್ರ ಬರಗಾಲ ಎದುರಿಸುತ್ತಿದ್ದರೂ ರೈತರ ಆರ್ಥಿಕ ಪರಿಸ್ಥಿತಿಗೆ ಹೈನುಗಾರಿಕೆ ಚೇತರಿಕೆ ನೀಡುತ್ತಿದೆ. ಇಂದು ಗ್ರಾಮೀಣ ಯುವಕರಲ್ಲಿ ಹೈನುಗಾರಿಕೆ ಮುಖ್ಯಕಸುಬಾಗಿ ಮಾಡಿಕೊಂಡು ಜೀವನವನ್ನು ಕಟ್ಟಿಕೊಂಡು ಉತ್ತಮ ಸಾಧನೆ ಮಾಡಬಹುದು ಎಂದು ತೋರಿಸಿದ್ದಾರೆ. ಹೈನುಗಾರಿಕೆ ರೈತರಿಗೆ ಖಚಿತ ಆದಾಯದ ಮೂಲವಾಗಿರುವುದರಿಂದ ಸರ್ಕಾರ ಹೈನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಹಾಲು ಒಕ್ಕೂಟಗಳ ವಿಸ್ತರಣಾಧಿಕಾರಿ ಲೋಕೇಶ್ ಮಾತನಾಡಿ, ಹೈನುಗಾರಿಕೆ ಉತ್ತಮ ಲಾಭದಾಯಕ ಉಪಕಸುಬಾಗಿದ್ದು , ಅದನ್ನು ವ್ಯವಸ್ಥಿತವಾಗಿ ರೂಪಿಸಿಕೊಂಡಲ್ಲಿ ಉತ್ತಮ ಆದಾಯ ಪಡೆಯಬಹುದು ಎಂದರು.
ಹಾಲು ಉತ್ಪಾದಕರ ಕಾರ್ಯದರ್ಶಿ ಲಿಖಿತ್ ಮಾತನಾಡಿ, 2023-24ನೇ ಸಾಲಿನಲ್ಲಿ ಒಟ್ಟು 6.88 ಲಕ್ಷ ಲಾಭಗಳಿಸಿದೆ. ಇದೇ ರೀತಿ ಮುಂದುವರಿದಲಿ ಮುಂದಿನ ವರ್ಷ ಹೆಚ್ಚು ಸಂಘಕ್ಕೆ ಲಾಭವಾಗುತ್ತದೆ ಎಂದು ತಿಳಿಸಿದರು
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ಪ್ರೇಮ್ ಕುಮಾರ್, ನಿರ್ದೇಶಕರಾದ ಶಶಿಧರ್, ನಟರಾಜ್, ಸತೀಶ್, ಶಿವಕುಮಾರ್, ದಕ್ಷಿಣ ಮೂರ್ತಿ, ರಮೇಶ್, ವೀರಭದ್ರಪ್ಪ, ಮೂರ್ತಪ್ಪ, ಮಲ್ಲಮ್ಮ, ಲತಾ, ಇದ್ದರು.