ಗುಳೇದಗುಡ್ಡ: ಇಂದಿನ ಹೊಸ ಜಗತ್ತಿಗೆ ಶಿಕ್ಷಣದ ಜೊತೆಗೆ ಕೌಶಲವು ಅಗತ್ಯವಾಗಿ ಬೇಕಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಶಿಕ್ಷಣದ ಜೊತೆಗೆ ಕೌಶಲ ಹೊಂದಿರಬೇಕು. ಗ್ರಾಮೀಣ ಭಾಗದ ಮಹಿಳಾ ಸಂಸ್ಥೆಯೊಂದಿಗೆ ಕೌಶಲದ ಮೂಲಕ ರಾಷ್ಟಮಟ್ಟಕ್ಕೆ ಬೆಳೆದು ನಿಂತಿರುವುದು ಸಂತೋಷಕರ ಸಂಗತಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಹೇಳಿದರು.
ಸಮೀಪದ ಕಟಗೇರಿ ಗ್ರಾಮದಲ್ಲಿ ಭಾನುವಾರ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ 2022-23ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ನಿರ್ಮಿಸಿದ ಸಾವಿತ್ರಿಬಾಯಿ ಪುಲೆ ಕೌಶಲ ತರಬೇತಿ ಕೇಂದ್ರದ ಸಂಜೀವಿನಿ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದೇಶದ ಮೊದಲ ಮಹಿಳಾ ಶಿಕ್ಷಕಿ, ಹೋರಾಟಗಾರ್ತಿ ಹಾಗೂ ದೇಶದ ಸ್ವಾತಂತ್ರ ಹೋರಾಟಕ್ಕೆ ದೊಡ್ಡ ಕೊಡುಗೆ ನೀಡಿದ ಸಾವಿತ್ರಿಬಾಯಿ ಅವರ ಹೆಸರಿನಲ್ಲಿ ಕಟ್ಟಡ ನಿರ್ಮಾಣವಾಗುತ್ತಿರುವುದು ಸಂತೋಷದ ಸಂಗತಿ. ಕಟಗೇರಿ ಗ್ರಾಮ ಪಂಚಾಯಿತಿಯ ಮಹಿಳೆಯರು ಸಂಘಟಿತರಾಗಿ ಸ್ವಸಹಾಯಗಳ ಮೂಲಕ ಉದ್ಯೋಗ ಕೌಶಲ ತರಬೇತಿ ಪಡೆದು ಆರ್ಥಿಕವಾಗಿ ಸಬಲಗೊಳ್ಳುವ ಮೂಲಕ ಬೇರೆ ಗ್ರಾಮಗಳ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದರು.
ಕೇಂದ್ರ ಸರ್ಕಾರ ಆತ್ಮ ನಿರ್ಭರ ಪ್ರಶಸ್ತಿ ಪಡೆದ ಚಾಮುಂಡೇಶ್ವರಿ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಭಾಗೀರಥಿ ಮೇಟಿ ಮಾತನಾಡಿ, ಕಟಗೇರಿ ಗ್ರಾಮ ಪಂಚಾಯಿತಿಯ ಮಹಿಳಾ ಒಕ್ಕೂಟದ ಸದಸ್ಯರು ಒಗ್ಗಟ್ಟಾಗಿ ಒಂದು ಲಕ್ಷ ರೂ.ವ್ಯಾಪಾರ ಪ್ರಾರಂಭಿಸಿ ಈಗ ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿದ್ದೇವೆ. ಅದಕ್ಕೆ ನಮ್ಮ ಸದಸ್ಯರ ಶ್ರಮ ಹಾಗೂ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರ ಸಹಕಾರವೇ ಕಾರಣ.
ಉದ್ಯೋಗದಲ್ಲಿ ಹೊಸ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡುವ ಮೂಲಕ ಮಾರುಕಟ್ಟೆಯನ್ನು ವಿಸ್ತರಿಸುತ್ತಿದ್ದೇವೆ. ಅಲ್ಲದೆ ಆರ್ಥಿಕವಾಗಿಯೂ ಸದೃಢರಾಗುತ್ತಿದ್ದೇವೆ. ನಮ್ಮ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ನೀಡಿದ್ದು ಹೆಮ್ಮೆ ಎನಿಸಿದೆ ಎಂದು ಹೇಳಿದರು.
ಶಾಸಕ ಜಿ.ಟಿ.ಪಾಟೀಲ ಅವರು ಸಾವಿತ್ರಿಬಾಯಿ ಪುಲೆ ಕೌಶಲ ತರಬೇತಿ ಕೇಂದ್ರದ ಸಂಜೀವಿನಿ ನೂತನ ಕಟ್ಟಡ ಉದ್ಘಾಟಿಸಿದರು. ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಸುಮಿತ್ರಾ ದ್ಯಾವನ್ನವರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಪ್ರಕಾಶ ಮೇಟಿ, ಪ್ರಮೋದ ಕವಡಿಮಟ್ಟಿ, ಮಹೇಶ ಹೊಸಗೌಡ್ರ. ಸಿದ್ದಲಿಂಗೇಶ ಕೊಲ್ಹಾರ ಇತರರು ಇದ್ದರು.