ಪಿರಿಯಾಪಟ್ಟಣ ತಾಲೂಕು ಮಾಕೋಡು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್ ಚಾಲನೆ ನೀಡಿದರು. 
ಜಿಲ್ಲೆ

ಹೈನುಗಾರಿಕೆಯಿಂದ ಆರ್ಥಿಕ ಅಭಿವೃದ್ಧಿ

ರವಿಕುಮಾರ್ ಪಿ. ಕೆ

ರಾವಂದೂರು: ಹೈನುಗಾರಿಕೆಯಿಂದ ಉತ್ತಮ ಬದುಕು ನಡೆಸಲು ಸಾಧ್ಯ ಎಂದು ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕು ಮಾಕೋಡು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಅದರಲ್ಲೂ ಮಹಿಳೆಯರು ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡಿ ಕುಟುಂಬ ನಿರ್ವಹಣೆ ಜತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಆದರ್ಶ ಮೆರೆಯುತ್ತಿದ್ದಾರೆ. ಆದುದ್ದರಿಂದ ತಂಬಾಕು, ಶುಂಠಿ ಬೆಳೆಯ ಜತೆಗೆ ಹೈನುಗಾರಿಕೆಗೂ ಸಹ ಹೆಚ್ಚು ಉತ್ತೇಜನವನ್ನು ನೀಡುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಮೈಸೂರು ಜಿಲ್ಲೆಯಲ್ಲಿ ಪಿರಿಯಾಪಟ್ಟಣ ತಾಲೂಕು ಹೈನುಗಾರಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, ನಮ್ಮ ತಂದೆಯವರು ಸಚಿವರಾದ ಮೇಲೆ ಪಶುಸಂಗೋಪನಾ ಇಲಾಖೆಯಲ್ಲಿ ಹೊಸ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದು, ಇದರಿಂದ ಹೈನುಗಾರಿಕೆ ಅವಲಂಬಿಸಿದ ರೈತರು ಯಾವುದೇ ರೀತಿ ಸಂಕಷ್ಟಕ್ಕೆ ಒಳಗಾಗದ ರೀತಿಯಲ್ಲಿ ಸರ್ಕಾರವು ಹೊಸ ಹೊಸ ಯೋಜನೆಗಳನ್ನು ರೂಪಿಸಲಾಗಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ನೂತನ ಕಟ್ಟಡಕ್ಕೆ ಹಣ ಸಹಾಯ ಬೇಕಾದಲ್ಲಿ ಶಾಸಕರ ನಿಧಿಯಿಂದ ಹಣ ನೀಡಲಾಗುವುದು ಎಂದು ತಿಳಿಸಿದರು.

ಮೈಮಲ್ ನಿರ್ದೇಶಕ ಪ್ರಕಾಶ್, ಗ್ರಾಮದ ಮುಖಂಡರಾದ ಕೃಷ್ಣೇಗೌಡ, ಸುರೇಶ್, ನೀಲಕಂಠ, ಸತೀಶ್, ಗ್ರಾಪಂ ಅಧ್ಯಕ್ಷೆ ಶೈಲಜಾ, ಮೈಮುಲ್ ವಿಸ್ತರಣಾಧಿಕಾರಿ ನಿಶ್ಚಿತ್, ಕಾರ್ಯದರ್ಶಿ ಛಾಯಾದೇವಿ, ಸಹಕಾರ ಸಂಘದ ಅಧ್ಯಕ್ಷೆ ಜಯಮ್ಮ , ಉಪಾಧ್ಯಕ್ಷೆ ಗೌರಮ್ಮ ಸೇರಿದಂತೆ ನಿರ್ದೇಶಕರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.