ಜಿಲ್ಲೆ

ಕೇವಲ ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಿಲ್ಲ

ಜಿ.ಹೆಚ್. ಧನ್ಯಕುಮಾರ್

ಚಿಕ್ಕಮಗಳೂರು: ಕೃಷಿಯೊಂದಿಗೆ ಹೈನುಗಾರಿಕೆ ಹಾಗೂ ಇತರೆ ಉಪ ಕಸುಬು ಮಾಡಿದವರು ಬದುಕಿನಲ್ಲಿ ನೆಮ್ಮದಿಯಾಗಿದ್ದಾರೆ. ಕೇವಲ ಕೃಷಿ ನಂಬಿಕೊಂಡರೆ ಮುಂದೆ ಬರಲು ಸಾಧ್ಯವಿಲ್ಲ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಬೀಕನಹಳ್ಳಿ ಪಶು ವೈದ್ಯಕೀಯ ಇಲಾಖೆ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜಾನುವಾರುಗಳಿಗೆ ಕಾಲು ಬಾಯಿ ರೋಗಕ್ಕೆ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇವಲ ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅರಿತ ನಮ್ಮ ಹಿರಿಯರು ನೂರಾರು ವರ್ಷಗಳ ಹಿಂದೆಯೇ ಕೃಷಿಯೊಂದಿಗೆ ಹೈನುಗಾರಿಕೆ ಆರಂಭಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಕೃಷಿಯೊಂದಿಗೆ ಇತರೆ ಕೃಷಿ ಸಂಬಂಧಿತ ಉದ್ಯಮ ಆರಂಭಿಸುವವರ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಎಲ್ಲರೂ ತಮ್ಮ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಸರ್ಕಾರಿ ಉದ್ಯೋಗಕ್ಕೆ ಸೇರಲಿ ಎಂದು ಬಯಸುತ್ತಿದ್ದಾರೆ. ಆದರೆ ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಯುವಕರು ವಿದ್ಯಾಭ್ಯಾಸದ ಜತೆಗೆ ಕೃಷಿ ಉದ್ಯಮ ಆರಂಭಿಸುವ ಕಡೆಯೂ ಆಸಕ್ತಿ ತೋರಿಸಬೇಕು. ಇದರಿಂದ ಉತ್ತಮ ಲಾಭ ಪಡೆಯಲು ಸಾಧ್ಯ. ಈ ಬಗ್ಗೆ ಕೃಷಿ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಗಳಲ್ಲಿ ಮಾಹಿತಿ ಪಡೆಯಬೇಕು ಎಂದು ತಿಳಿಸಿದರು.
ಜಾನುವಾರುಗಳಿಗೆ ಕಾಲು ಬಾಯಿ ರೋಗ ಬಾರದಿರಲಿ ಎಂದು ಮುಂಜಾಗ್ರತ ಕ್ರಮವಾಗಿ ಲಸಿಕೆ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೇಬಿಸ್ ಲಸಿಕೆ ಹಾಕಲಾಗುವುದು. ಜಾನುವಾರುಗಳು ರೋಗ ಮುಕ್ತವಾದಾಗ ಅವುಗಳ ಹಾಲನ್ನು ವಿದೇಶಗಳಿಗೆ ರಫ್ತು ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿರುವ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದರು.
ಬಿಕನಹಳ್ಳಿ ಗ್ರಾಪಂ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷೆ ಲೀಲಾವತಿ, ಸದಸ್ಯರಾದ ವಿಜಯಕುಮಾರ್, ಯೋಗೇಶ್, ಪಶುಪಾಲಿ ಕ್ಲಿನಿಕ್ ಉಪ ನಿರ್ದೇಶಕ ಡಾಕ್ಟರ್ ನಾಗರಾಜ್ ಮತ್ತಿತರರಿದ್ದರು.