ಹಾಸನ: ಪ್ರತಿ ಐದು ವರ್ಷಕ್ಕೊಮ್ಮೆ ನಡೆಸುವ ಆರ್ಥಿಕ ಗಣತಿಯನ್ನು 2020ರ ಮಾರ್ಚ್ ಅಂತ್ಯದವರೆಗೆ ಹಮ್ಮಿಕೊಂಡಿದ್ದು, ಸಾರ್ವಜನಿಕರು ಸೂಕ್ತ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಮನವಿ ಮಾಡಿದರು.
ದೇಶಾದ್ಯಂತ ನಡೆಯುವ ಪ್ರಕ್ರಿಯೆ ಇದಾಗಿದ್ದು, ಇಲ್ಲಿವರೆಗೆ 6 ಗಣತಿಗಳು ಮುಗಿದಿವೆ. ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾಯ ರ್ಕ್ರಮ ಅನುಷ್ಠಾನ ಮಂತ್ರಾಲಯದ ಕೇಂದ್ರದಿಂದ ಗಣತಿ ನಡೆಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ವಿಭಾ ಗಗಳ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಉದ್ಯಮಗಳ ಪಟ್ಟಿ ತಯಾರಿಸುವುದು ಇದರ ಮುಖ್ಯ ಉದ್ದೇಶ. 6ನೇ ಆರ್ಥಿಕ ಗಣತಿ ಪ್ರಕಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 11,2,014 ಮತ್ತು ನಗರ ವ್ಯಾಪ್ತಿಯಲ್ಲಿ 28,962 ಉದ್ಯಮಗಳಿವೆ ಎಂದರು.
64 ಮೇಲ್ವಿಚಾರಕರ ನೇಮಕ: ಜಿಲ್ಲಾದ್ಯಂತ 622 ಗಣತಿದಾರರು ಹಾಗೂ 64 ಜನ ಮೇಲ್ವಿಚಾರಕರನ್ನು ಆರ್ಥಿಕ ಗಣತಿಗೆ ನೇಮಿಸಲಾಗಿದೆ. ಗ್ರಾಮ ಪಂಚಾಯಿತಿ, ಮನೆ-ಮನೆಗೆ ತೆರಳಿ ಮೊಬೈಲ್ ಆ್ಯಪ್ ಮೂಲಕ ಆರ್ಥಿಕ ಚಟುವಟಿಕೆ ಕುರಿತ ಮಾಹಿತಿ ದಾಖಲು ಮಾಡಲಾಗುತ್ತದೆ.
ಸರ್ಕಾರಿ ಕಚೇರಿ ಹೊರತುಪಡಿಸಿ ಖಾಸಗಿ ಆಸ್ಪತ್ರೆ, ಕ್ಲಿನಿಕ್, ಸ್ವಸಹಾಯ ಸಂಘ, ಸ್ತ್ರೀ ಶಕ್ತಿ ಸಂಘ ಸೇರಿ ಇತರ ಸೇವೆಗಳ ಆರ್ಥಿಕ ಚಟುವಟಿಕೆಯ ಮೂಲವನ್ನು ಪರಿಗಣಿಸಲಾಗುತ್ತದೆ. ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆರ್ಥಿಕ ಗಣತಿ ಮಾಡಲಾಗುತ್ತಿದೆ ಎಂದರು. ಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಇದ್ದರು.
ಬೆಳೆ ಉತ್ಪನ್ನ ಹಾಗೂ ಪ್ಲಾಂಟೇಷನ್ ಬೆಳೆ ಬೆಳೆಯುವವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಮಟ್ಟದ ಸಾರ್ವಜನಿಕ ಆಡಳಿತ ಮಾಡುವ ಎಲ್ಲ ಸಚಿವಾಲಯಗಳು, ಕಚೇರಿಗಳು, ಜೂಜಾಟ, ಅಂತಾರಾಷ್ಟ್ರೀಯ ಸಂಘಟನೆಗಳಾದ ಯುನೈಟೆಡ್ ನೇಷನ್ ಮತ್ತು ಅವುಗಳ ಏಜೆನ್ಸಿಗಳನ್ನು ಗಣತಿಯಿಂದ ಹೊರಗಿಡಲಾಗಿದೆ. ಉಳಿದ ಆರ್ಥಿಕ ಚಟುವಟಿಕೆಗಳಾದ ತಯಾರಿಕೆ, ಸೇವೆಗಳು, ಮಾರಾಟ ನೋಂದಣಿಯಾದ, ನೋಂದಣಿಯಾಗದೆ ಇರುವ ಸಂಘಟಿತ, ಅಸಂಘಟಿತ ಆರ್ಥಿಕ ಚಟುವಟಿಕೆಗಳನ್ನು ಗಣತಿ ಮಾಡಲಾಗುವುದು ಎಂದರು.
ಗಣತಿದಾರರಿಗೆ ಸಾರ್ವಜನಿಕರು ಅಗತ್ಯ ಮಾಹಿತಿ ನೀಡಬೇಕು. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ಆರ್ಥಿಕ ಗಣತಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ ಜಿಲ್ಲಾಧಿಕಾರಿ ಆರ್ಥಿಕ ಚಟುವಟಿಕೆಗಳ ಬಗ್ಗೆ ಜನರು ಮಾಹಿತಿ ನೀಡಬೇಕು ಎಂದರು.
ರಾಜ್ಯ ಮಟ್ಟದಲ್ಲಿ ಸರ್ಕಾರ ಯಾವುದೇ ಯೋಜನೆ ಕೈಗೊಳ್ಳುವುದಕ್ಕೆ ಈ ದತ್ತಾಂಶ ಅಗತ್ಯವಾಗಿದೆ. ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಗಣತಿದಾರರಿಗೆ ಸಹಕರಿಸಬೇಕು. ಏ.15 ರಿಂದ ಮೇ 31ರವರೆಗೆ ಜನಗಣತಿ ಮನೆ ಪಟ್ಟಿ ಕಾರ್ಯಾಚರಣೆ ಪ್ರಾರಂಭವಾಗುವ ಕಾರಣ ಆರ್ಥಿಕ ಗಣತಿಯನ್ನು ಏ.14ರೊಳಗೆ ಪೂರ್ಣಗೊಳಿಸಲಾಗುವುದು ಎಂದರು.
ಪೊಲೀಸರಿಗೆ ದಾಖಲೆ: ಹೇಮಾವತಿ ಜಲಾಶಯ ಯೋಜನೆ ಮುಳುಗಡೆ ಸಂತ್ರಸ್ತರ ಭೂಮಿ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರಿಗೆ ನೀಡಲಾಗಿದೆ. ಸಕಲೇಶಪುರ ತಾಲೂಕು ಕಚೇರಿ ಖಜಾನೆಯಲ್ಲಿರುವ ದಾಖಲೆಗಳನ್ನು ನೀಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದ್ದು, ಜೆರಾಕ್ಸ್ ಪ್ರತಿಗಳನ್ನು ಇಟ್ಟುಕೊಳ್ಳಲಾಗಿದೆ. ಭೂಮಿ ಅಕ್ರಮ ಮಂಜೂರಾತಿ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಡಿಸಿ ಆರ್. ಗಿರೀಶ್ ಹೇಳಿದರು.