ಮೂಡಿಗೆರೆ: ಹಲಸು ಋತುಮಾನದ ಬೆಳೆಯಾಗಿದ್ದರೂ ಸಾರ್ವಕಾಲಿಕ ಮೌಲ್ಯವರ್ಧಿತ ಪದಾರ್ಥಗಳನ್ನು ತಯಾರಿಸಲು ಸಾಧ್ಯ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಕೊಯ್ಲೋತ್ತರ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಾಂತರಾಜು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಐಸಿಆರ್, ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ಸಖರಾಯಪಟ್ಟಣದ ಪರಿವರ್ತನಾ ಟ್ರಸ್ಟ್‌ನಿಂದ ನಡೆದ ಹಲಸಿನ ಮೌಲ್ಯವರ್ಧಿತ ಪದಾರ್ಥ ತಯಾರಿಕೆ ಹಾಗೂ ತಂತ್ರಜ್ಞಾನಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲಸು ಬೆಳೆಯಲ್ಲಿ ಸುಧಾರಿತ ಕ್ರಮಗಳು ಹಾಗೂ ಹಲಸಿನಿಂದ ವಿವಿಧ ಬಗೆಯ ಮೌಲ್ಯವರ್ಧಿತ ಪದಾರ್ಥಗಳನ್ನು ತಯಾರಿಸಲು ಸಾರ್ವಜನಿಕರಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಸಖರಾಯಪಟ್ಟಣದ ಪರಿವರ್ತನಾ ಟ್ರಸ್ಟ್ ತಾಂತ್ರಿಕ ಸಲಹೆಗಾರ ಶಿವಣ್ಣ ಮಾತನಾಡಿ, ಹಲಸಿನ ಬೆಳೆಯನ್ನು ಜೀವನೋಪಾಯಕ್ಕೆ ದಾರಿಯಾಗುವ ರೀತಿಯಲ್ಲಿ ಬಳಸಿಕೊಳ್ಳಬೇಕು. ವಿವಿಧ ವಿಶ್ವವಿದ್ಯಾಲಯಗಳು ಅಭಿವೃದ್ಧಿಪಡಿಸಿರುವ ಹಲಸಿನ ಹಣ್ಣಿನ ಪದಾರ್ಥ ತಯಾರಿಕೆಯ ತಂತ್ರಜ್ಞಾನಗಳ ತಿಳಿದುಕೊಳ್ಳಲು ಅವಕಾಶವಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ ಮಾತನಾಡಿ, ಹಲಸಿನಕಾಯಿ ವರ್ಷದ ಕೃಷಿಯಾಗಿದೆ. ಹಲಸಿನ ಬೆಳೆಯಲ್ಲಿ ಶೇ.10ರಷ್ಟನ್ನು ಮಾತ್ರ ಮೌಲ್ಯವರ್ಧಿತವಾಗಿ ಜನ ಬಳಸುತ್ತಿದ್ದಾರೆ. ತರಬೇತಿ ಪಡೆದವರು ಆಯಾ ಗ್ರಾಮದಲ್ಲಿ ಗುಂಪುಗಳನ್ನು ರಚಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಕೆವಿಕೆ ಸಹ ವಿಸ್ತರಣಾ ನಿರ್ದೇಶಕ ಡಾ. ಎಂ.ಶಿವಪ್ರಸಾದ್, ವಿಜ್ಞಾನಿಗಳಾದ ಡಾ. ಜಿ.ಎಂ.ಪ್ರಶಾಂತ್, ಡಾ. ಸುರೇಶ್, ಡಾ. ಎಂ.ವೈ.ಉಲ್ಲಾಸ್ ಇತರರಿದ್ದರು.