ಸಂದೀಪ್ ಸಾಲ್ಯಾನ್ ಬಂಟ್ವಾಳ
ಎಷ್ಟೇ ಪ್ರಯತ್ನ ಪಟ್ಟರೂ, ಎಷ್ಟೇ ಜಾಗೃತಿ ಮೂಡಿಸಿದರೂ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲು ಸಾಧ್ಯವಾಗುತ್ತಿಲ್ಲ. ಹಾಗಾದರೆ ಬಳಕೆ ಮಾಡಿದ ಪ್ಲಾಸ್ಟಿಕ್ ಚೀಲಗಳು, ಬಾಟಲ್‌ಗಳು, ಚೊಕೊಲೇಟ್ ಕವರ್‌ಗಳನ್ನು ಏನು ಮಾಡಬೇಕು? ಹೇಗೆ ವಿಲೇವಾರಿ ಮಾಡಬೇಕು? ಎನ್ನುವುದೇ ಎಲ್ಲರೆದುರು ಇರುವ ಪ್ರಶ್ನೆ. ಇದಕ್ಕೊಂದು ಪರಿಹಾರ ಎನ್ನುವಂತೆ ಬಂಟ್ವಾಳ ತಾಲೂಕಿನ ಮೊಡಂಕಾಪುವಿನಲ್ಲಿರುವ ಕಾರ್ಮೆಲ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಎಲ್ಲೆಂದರಲ್ಲಿ ಬಿದ್ದು ಪ್ರಕೃತಿ ಸೇರಿ ಪರಿಸರವನ್ನು ಮಾಲಿನ್ಯ ಮಾಡುವ ವ್ಯರ್ಥ ಪ್ಲಾಸ್ಟಿಕ್‌ಗಳಿಂದಲೇ ಬ್ರಿಕ್‌ಗಳನ್ನು ತಯಾರಿಸಿ ಅವುಗಳಿಂದ ಸಾರ್ವಜನಿಕರಿಗೆ ಉಪಯೋಗವಾಗುವ ಬೆಂಚುಗಳನ್ನು ತಯಾರಿಸುತ್ತಿದ್ದಾರೆ. ಇಂತಹ ಇಕೋ ಬ್ರಿಕ್‌ನಿಂದ ತಯಾರಾದ ಬೆಂಚು ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರ ತಂಗುದಾಣದಲ್ಲಿ ಗಮನ ಸೆಳೆಯುತ್ತಿದೆ.
ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಕಾರ್ಮೆಲ್ ಕಾಲೇಜಿನ ಎನ್ನೆಸ್ಸೆಸ್ ಘಟಕ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ. ಈ ಪೈಕಿ ಇಕೋಬ್ರಿಕ್‌ಗಳು ಒಂದು. ವ್ಯರ್ಥವಾಗುವ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಪ್ಲಾಸ್ಟಿಕ್ ಕೈ ಚೀಲ, ಚೊಕೊಲೇಟ್, ಬಿಸ್ಕೆಟ್ ರ‌್ಯಾಪರ್‌ಗಳು ಸೇರಿದಂತೆ ಎಲ್ಲ ರೀತಿಯ ಪಾಸ್ಟಿಕ್‌ಗಳನ್ನು ತುಂಬಿ ಅವುಗಳನ್ನು ಗಟ್ಟಿಮುಟ್ಟಾದ ಬ್ರಿಕ್‌ಗಳನ್ನಾಗಿ ತಯಾರಿಸಿ ಸಿವಿಲ್ ಕೆಲಸಗಳಲ್ಲಿ ಕಲ್ಲುಗಳ ಬದಲಿಗೆ ಬಳಸಿಕೊಳ್ಳಲಾಗುತ್ತದೆ. ಇದರಿಂದಾಗಿ ಪ್ಲಾಸ್ಟಿಕ್ ವಸ್ತುಗಳು ಮಣ್ಣಿನಡಿ ಸೇರಿ ಪರಿಸರಕ್ಕೆ ಮಾರಕವಾಗುವ ಬದಲು ಬ್ರಿಕ್‌ಗಳ ರೂಪ ಪಡೆದು ಜನ ಬಳಕೆಯ ವಸ್ತುಗಳಾಗುತ್ತಿವೆ.
ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು ಪ್ಲಾಸ್ಟಿಕ್ ವಸ್ತುಗಳಿಂದ ನಿರ್ಮಾಣವಾದ ಇಕೋ ಬ್ರಿಕ್‌ಗಳನ್ನು ಬಳಸಿ ಕಾಂಕ್ರೀಟ್ ಬೆಂಚುಗಳನ್ನು ತಯಾರಿಸಿದ್ದಾರೆ. ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ 50 ಬ್ರಿಕ್‌ಗಳನ್ನು ಉಪಯೋಗಿಸಿ ನಿರ್ಮಿಸಿದ ಬೆಂಚು ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಬಂಟ್ವಾಳ ಪುರಸಭೆ ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳ ಸಹಕಾರ ನೀಡಿದೆ. ಈ ಕೆಲಸದಲ್ಲಿ ಪರಿಣತಿ ಪಡೆದ ಡೊಲ್ಫಿ ಎಂಬುವರು ಸಿವಿಲ್ ಕೆಲಸ ಮಾಡಿಕೊಟ್ಟಿದ್ದಾರೆ. ಈ ಹಿಂದೆ ಇದೇ ಮಾದರಿಯ ಬೆಂಚ್‌ಗಳನ್ನು ಕಾರ್ಮೆಲ್ ಕಾಲೇಜಿನ ಆವರಣದಲ್ಲಿ ಹಾಗೂ ಕಿನ್ನಿಬೆಟ್ಟು ಶಾಲೆಯಲ್ಲೂ ನಿರ್ಮಿಸಲಾಗಿದೆ.
2020ರಲ್ಲಿ ಕಾಲೇಜು ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಚಂದ್ರಿಕಾ ಎಂಬುವರು ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ತರಬೇತುಗೊಳಿಸಿದ್ದರು. ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಸಹಕಾರ ನೀಡಿದ್ದರು. ಎನ್ನೆಸ್ಸೆಸ್ ವಿದ್ಯಾರ್ಥಿಗಳು ಸ್ಥಳಿಯ ಶಾಲೆ ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದರೆ ಇತರ ವಿದ್ಯಾರ್ಥಿಗಳು ಅಂಗಡಿ, ಮನೆಗಳಿಂದ ಪ್ಲಾಸ್ಟಿಕ್ ಸಂಗ್ರಹಿಸಿದ್ದರು.
ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಇಕೋ ಬ್ರಿಕ್‌ಗಳನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಆರಂಭಿಸಿ ಈಗಿನ ವಿದ್ಯಾರ್ಥಿಗಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮನೆ ಅಂಗಡಿಗಳಿಂದ ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಿ ಬ್ರಿಕ್‌ಗಳನ್ನು ತಯಾರಿಸಿದ್ದಾರೆ. ಬಂಟ್ಚಾಳ ಪುರಸಭೆ ಹಾಗೂ ಲಯನ್ಸ್ ಕ್ಲಬ್ ಸಹಕಾರ ನೀಡಿದ್ದಾರೆ. - ಡಾ.ಲತಾ ಫರ್ನಾಂಡಿಸ್, ಪ್ರಾಂಶುಪಾಲರು, ಕಾರ್ಮೆಲ್ ಪದವಿ ಕಾಲೇಜು, ಮೊಡಂಕಾಪು https://www.vijayavani.net/a-colorful-traditional-festival https://www.vijayavani.net/plastic-ban