ಸಿಂಧನೂರಿನ ಕುಂಬಾರ ಓಣಿಯಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ತಯಾರಿಸುತ್ತಿರುವ ನಾಗರತ್ನಾ ಕುಂಬಾರ. 
ಜಿಲ್ಲೆ

ಪರಿಸರ ಸ್ನೇಹಿ ಮಣ್ಣಿನ ಗಣಪಗೆ ಬೇಡಿಕೆ

ರುದ್ರಪ್ಪ ವಾಲಿ

ಸಿಂಧನೂರು: ನಗರದ ಕುಂಬಾರ ಓಣಿಯ ನಾಗರತ್ನಾ ಕುಂಬಾರ ಅವರ ಮನೆಯಲ್ಲಿ ಈ ಬಾರಿ ವಿಶೇಷವಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಸಿದ್ಧಗೊಳ್ಳುತ್ತಿದ್ದು ಈಗಾಗಲೇ 100 ಗಣೇಶ ಮೂರ್ತಿಗಳನ್ನು ಗ್ರಾಹಕರು ಬುಕ್ ಮಾಡಿದ್ದಾರೆ.

ಕಳೆದ ಮೂವತ್ತು ವರ್ಷಗಳಿಂದ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಇವರು ತಮ್ಮ ಕೈಚಳಕದಿಂದ ಅದ್ಭುತವಾದ ಗಣಪ ಮೂರ್ತಿಗಳನ್ನು ಬೇಡಿಕೆಗೆ ತಕ್ಕಂತೆ ವಿವಿಧ ಭಂಗಿಗಳಲ್ಲಿ ಆಕರ್ಷಕ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ.

ಈಗಾಗಲೇ ನಗರದ ವನಸಿರಿ ಫೌಂಡೇಷನ್ ಪರಿಸರ ಸ್ನೇಹಿ ಗಣಪತಿ ಅಲ್ಲಲ್ಲಿ ಸ್ಥಾಪನೆಯಾಗಬೇಕೆಂಬ ಸಂಕಲ್ಪ ಹೊಂದಿದ್ದು, ನಾಗರತ್ನಾ ಕುಂಬಾರ ಅವರಲ್ಲಿ 100 ಗಣಪತಿ ಮೂರ್ತಿಗಳನ್ನು ಬುಕ್ ಮಾಡಿದೆ. ಗಣಪ ಮೂರ್ತಿಗಳಿಗೆ ಬೀಜಾಂಕುರ ಮಾಡಿದ್ದು ಬಹುತೇಕ ಮೂರ್ತಿಗಳಲ್ಲಿ ಬೀಜ ಮೊಳಕೆಯೊಡೆದಿದೆ. ಈಗ ಸಿದ್ಧಗೊಳ್ಳುತ್ತಿರುವ ಮೂರ್ತಿಗಳ ಬೆಲೆಯು ಕೈಗೆಟುಕುವ ದರದಲ್ಲಿರುವುದರಿಂದ ಬೇಡಿಕೆ ಹೆಚ್ಚಿದೆ.

ಪರಿಸರ ಗಣಪ ಮೂರ್ತಿಯೇ ಶ್ರೇಷ್ಠ

ಈಗಾಗಲೇ ಕುಂಬಾರ ಓಣಿಯಲ್ಲಿ ನಾನಾ ತರಹದ ಗಣಪನ ಮೂರ್ತಿ ಸಿದ್ಧಗೊಂಡಿವೆ. ವನಸಿರಿ ಫೌಂಡೇಷನ್ ವಿಶೇಷ ಸಂಕಲ್ಪ ತೊಟ್ಟಿದ್ದು ತಾಲೂಕಿನಾದ್ಯಂತ ಪರಿಸರ ಸ್ನೇಹಿ ಗಣಪ ಮೂರ್ತಿ ಸ್ಥಾಪಿಸಬೇಕು. ಮೂರ್ತಿ ನಿರ್ಮಾಣ ಹಂತದಲ್ಲಿ ಬೀಜಾಂಕುರ ಮಾಡಿದ್ದು ಮೂರ್ತಿ ವಿಸರ್ಜನೆಯಾದ ನಂತರ ಅಲ್ಲಿ ಸಸಿ ಬಳೆದು ವೃಕ್ಷ್ವಆಗಿ ಬೆಳೆಯಬೇಕೆಂಬ ಆಶಯ ಹೊಂದಲಾಗಿದೆ. ಇದರಿಂದ ಜಲ ಮಾಲಿನ್ಯವಾಗದೆ ಸಸಿ ಬೆಳೆದು ಉತ್ತಮ ಪರಿಸರ ನಿರ್ಮಾಣವಾಗಿದೆ. ಈ ರೀತಿಯ ಗಣಪನ ಮೂರ್ತಿಗಳನ್ನು ಶಾಲೆ-ಕಾಲೇಜು, ಸಾರ್ವಜನಿಕ ಸ್ಥಾನಗಳಲ್ಲಿ ಸ್ಥಾಪಿಸಬೇಕೆಂಬ ಜಾಗೃತಿಯನ್ನು ವನಸಿರಿ ೌಂಡೇಷನ್ ಮಾಡುತ್ತಿದೆ.
ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಕೈಬಿಡಿ
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಈ ಹಿಂದೆ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳೇ ಹೇರಳವಾಗಿ ಪ್ರತಿಷ್ಠಾಪಿಸಲಾಗಿತ್ತು. ದೊಡ್ಡ ಗಣೇಶ ಮೂರ್ತಿ ಜತೆಗೆ ವಿವಿಧ ಕಲಾಕೃತಿಯಲ್ಲಿ ಮೂರ್ತಿ ಸಿಗುತ್ತವೆ ಎಂಬ ಕಾರಣಕ್ಕೆ ಗಣೇಶ ಪ್ರತಿಷ್ಠಾಪಿಸುವವರು ಇವುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಈ ಬಾರಿ ನಗರಸಭೆ ಈಗಾಗಲೇ ನಾಲ್ಕು ತಂಡಗಳನ್ನು ರಚಿಸಿದ್ದು ನಗರ ವ್ಯಾಪ್ತಿಯಲ್ಲಿ ಎಲ್ಲಿಯೂ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿ ತಯಾರಿಕೆ ಮತ್ತು ಮಾರಾಟದ ಮೇಲೆ ಕಣ್ಣಿಟ್ಟಿದೆ. ಇದರಿಂದ ಪರಿಸರ ಸ್ನೇಹ ಗಣೇಶ ಮೂರ್ತಿಗಳಿಗೆ ಸಹಜವಾಗಿ ಬೇಡಿಕೆ ಹೆಚ್ಚಾಗುತ್ತಲಿದೆ.

ಈಗಾಗಲೇ ನಗರಸಭೆಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಪರಿಸರ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಜಾಗೃತಿ ಮೂಡಿಸಲು ಮುಂದಾಗಲಾಗಿದೆ. ಐದು ವಿಶೇಷ ತಂಡಗಳನ್ನು ರಚಿಸಿದ್ದು ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿ ಮಾರಾಟ ನಿಷೇಧಿಸಿದ್ದು ಪರಿಸರ ಸ್ನೇಹಿ ಗಣಪ ಮೂರ್ತಿ ತಯಾರಿಸುವವರಿಗೆ ಪ್ರೋತ್ಸಾಹಿಸಲಾಗುವುದು.

ಮಂಜುನಾಥ ಗುಂಡೂರು
ಪೌರಾಯುಕ್ತ, ನಗರಸಭೆ ಸಿಂಧನೂರು.

ಈ ಮೊದಲು ನಾವು ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಮೂವತ್ತು ವರ್ಷದಿಂದ ಪರಿಸರ ಸ್ನೇಹಿ ಮಣ್ಣಿನ ಗಣಪ ಮೂರ್ತಿ ತಯಾರಿಸಿಕೊಂಡು ಬಂದಿದ್ದೇವೆ. ಕಳೆದ ವರ್ಷದಿಂದ ಸಿಂಧನೂರಿನಲ್ಲಿ ತಯಾರಿಸುತ್ತಿದ್ದೇವೆ. ಈ ಹಿಂದೆ ಬೇಡಿಕೆ ಕಡಿಮೆ ಇತ್ತು. ಈಗ ವನಸಿರಿ ಫೌಂಡೇಷನ್ 100 ಗಣೇಶ ಮೂರ್ತಿ ಖರೀದಿ ಮಾಡಿದ್ದು ಇದರಿಂದ ಪ್ರೋತ್ಸಾಹ ಸಿಕ್ಕಿದೆ. 300 ಕ್ಕೂ ಮೇಲ್ಪಟ್ಟು ಮೂರ್ತಿಗಳ ಬೇಡಿಕೆ ಬಂದಿದೆ. ಮಣ್ಣಿನಿಂದಲೇ ತಯಾರಿಸಿ, ಪರಿಸರ ಉಳಿಸುವ ಹೊಣೆ ಹೊತ್ತಿದ್ದೇವೆ.


ನಾಗರತ್ನಾ ಕುಂಬಾರ

ಗಣೇಶ ಮೂರ್ತಿ ಕಲಾವಿದೆ, ಸಿಂಧನೂರು.