ಜಿಲ್ಲೆ

ಬೆಂಗಳೂರಿಗೆ ಬಂತು ಪರಿಸರ ಸ್ನೇಹಿ ವಿಮಾನ!

ಬೆಂಗಳೂರು: ಕಡಿಮೆ ಪ್ರಮಾಣದಲ್ಲಿ ಹೊಗೆ ಉಗುಳುವ ದೇಶದ ಮೊದಲ ಪರಿಸರ ಸ್ನೇಹಿ ಬೋಯಿಂಗ್​ ಹೊಂದಿರುವ ವಿಮಾನವನ್ನು ಆಕಾಸ ಏರ್​ಲೈನ್​ ಪರಿಚಯಿಸಿದೆ. ಬೋಯಿಂಗ್​ 737 MAX , 737-8-200 ವಿಮಾನವು ಯುಎಸ್​ಎನ ಸಿಯಾಟಲ್​ನಿಂದ ಹೊರಟು ಮಂಗಳವಾರ ಬೆಂಗಳೂರಿಗೆ ತಲುಪಿದೆ.

ಈ ಬಗ್ಗೆ ಆಕಾಸ ಏರ್​ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್​ ದುಬೆ ಮಾತನಾಡಿ, ಆಕಾಸ ವಿಮಾನಯಾನ ಪ್ರಾರಂಭಗೊಂಡ ಒಂದೇ ವರ್ಷದಲ್ಲಿ ತನ್ನ ವಿಮಾನಗಳ ಸಂಖ್ಯೆಯನ್ನು 20ಕ್ಕೆ ಹೆಚ್ಚಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಬೋಯಿಂಗ್​ 737 MAX ವಿಮಾನ ಪಡೆದ ಸಂಸ್ಥೆಯೂ ನಮ್ಮದಾಗಿದೆ. ಇದು ಸಾಮಾನ್ಯ ಎಂಜಿನ್​ಗಿಂತ ಶೇ.20ರಷ್ಟು ಕಡಿಮೆ ಹೊಗೆ ಉಗುಳಲಿದ್ದು, ಹೆಚ್ಚು ಪರಿಸರ ಸ್ನೇಹಿಯಾಗಿರುವುದು ಇದರ ವಿಶೇಷತೆ. ಈ ಬೋಯಿಂಗ್​ನಿಂದ ಗ್ರಾಹಕರಿಗೆ ಆರಾಮದಾಯಕ ಪ್ರಯಾಣ ದೊರೆಯಲಿದೆ. ಅಲ್ಲದೆ ಬೇರೆ ವಿಮಾನಗಳಿಗಿಂತ ಶೇ.50ರಷ್ಟು ಕಡಿಮೆ ಶಬ್ದ ಮಾಡುತ್ತದೆ ಎಂದು ತಿಳಿಸಿದರು.

ಕಳೆದ ವರ್ಷ ಆಗಸ್ಟ್​ನಲ್ಲಿ ವಾಣಿಜ್ಯ ಕಾರ್ಯಾಚರಣೆ ಪ್ರಾರಂಭಿಸಿದ ಆಕಾಸ ವಿಮಾನಸಂಸ್ಥೆಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆಯಾಗಿದೆ. ಪ್ರಸ್ತುತ 20 ವಿಮಾನಗಳನ್ನು ಹೊಂದಿದೆ. ದೇಶದಲ್ಲಿ 16 ನಗರಗಳನ್ನು ಸಂಪರ್ಕಿಸುತ್ತಿದ್ದು, 35 ವಿವಿಧ ಮಾರ್ಗಗಳಲ್ಲಿ ಹಾರಾಟ ನಡೆಸುತ್ತಿದೆ. ಈವರೆಗೆ 40 ಲಕ್ಷ ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಿದ್ದಾರೆ.