ಮೈಸೂರು: ಮಾರಣಾಂತಿಕ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದವರಿಗೆ ವೆಂಟಿಲೇಟರ್ ಬಳಕೆಯೇ ಅಂತಿಮ ಎಂಬ ನಂಬಿಕೆ ಈಗ ಅಗತ್ಯವಿಲ್ಲ. ಅದನ್ನೂ ಮೀರಿದ ‘ಎಕ್ಮೋ’ ಎಂಬ ಸಾಧನ ಬಳಕೆಗೆ ಬಂದಿದ್ದು, ನಮ್ಮ ಆಸ್ಪತ್ರೆಯಲ್ಲಿ ಈ ಸಾಧನ ಬಳಸಿ 41 ವರ್ಷ ವಯಸ್ಸಿನ ಮಹಿಳಾ ರೋಗಿಯ ಜೀವ ಉಳಿಸಲಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯ ಡಾ.ಉಪೇಂದ್ರ ಶೆಣೈ ತಿಳಿಸಿದರು.
ರೋಗಿಯೊಬ್ಬರು ಎಚ್1ಎನ್1 ಕಾರಣದಿಂದಾಗಿ ತೀವ್ರ ಜ್ವರ, ಕೆಮ್ಮು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಇವರು ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ವೇಳೆ ವೆಂಟಿಲೇಟರ್ ಬಳಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶ್ವಾಸಕೋಶ ಚೇತರಿಸಿಕೊಳ್ಳದ ಕಾರಣ ಹಾಗೂ ರಕ್ತಕ್ಕೆ ಆಮ್ಲಜನಕ ಪೂರೈಸಲು ಅಸಾಧ್ಯವಾದ ಸ್ಥಿತಿ ತಲುಪಿದ್ದ ಕಾರಣ ಮಣಿಪಾಲ್ ಆಸ್ಪತ್ರೆಗೆ ದಾಖಲಾಗುವಂತೆ ಶಿಫಾರಸು ಮಾಡಿದ್ದರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಮ್ಮ ಆಸ್ಪತ್ರೆಯಲ್ಲಿ ‘ಎಕ್ಮೋ’ ಎಂಬ ಸಾಧನದ ಮೂಲಕ ಚಿಕಿತ್ಸೆ ನೀಡಿದ್ದು, ಈಗ ಚೇತರಿಸಿಕೊಂಡಿದ್ದಾರೆ. ವೆಂಟಿಲೇಟರ್ ಇಲ್ಲದೆ ಅತ್ಯಾಧುನಿಕ ವಿಧಾನ ಉಪಯುಕ್ತವಾಗಿದೆ ಎಂದು ತಿಳಿಸಿದರು.
ತಜ್ಞ ವೈದ್ಯೆ ಡಾ.ಲಕ್ಷ್ಮೀ ನರಸಿಂಹನ್ ಮಾತನಾಡಿ, ಈ ನೂತನ ‘ಎಕ್ಮೋ’ ಸಾಧನ ರೋಗಿಯ ದೇಹಕ್ಕೆ ಅಳವಡಿಸಿರುವ ಕೊಳವೆ ಮೂಲಕ ಆಮ್ಲಜನಕಯುಕ್ತ ರಕ್ತ ಸೇರಿಸುತ್ತದೆ. ಇದರಿಂದಾಗಿ ಶ್ವಾಸಕೋಶ ಸೂಕ್ತವಾಗಿ ಕೆಲಸ ಮಾಡದಿರುವ ರೋಗಿಗೆ ಆಮ್ಲಜನಕಯುಕ್ತ ರಕ್ತ ದೇಹಕ್ಕೆ ಸೇರ್ಪಡೆಯಾಗಿ ಚೇತರಿಕೆ ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಶ್ವಾಸಕೋಶ ತಜ್ಞ ಡಾ.ಮಹದೇವ್ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿಯೂ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಶ್ವಾಸಕೋಶವು ವೆಂಟಿಲೇಟರ್‌ನಿಂದ ಬರುವ ಆಮ್ಲಜನಕವನ್ನು ರಕ್ತಕ್ಕೆ ಸೇರ್ಪಡೆ ಮಾಡದಷ್ಟು ಅನಾರೋಗ್ಯಕ್ಕೀಡಾಗಿರುವ ವೇಳೆ ‘ಎಕ್ಮೋ’ ಸಾಧನ ಬಳಸಿ ರೋಗಿಯ ರಕ್ತಕ್ಕೆ ಆಮ್ಲಜನಕ ಮಿಶ್ರಣ ಮಾಡಿ ಪ್ರಾಣ ಉಳಿಸಲಾಗುತ್ತದೆ. ಕ್ರಮೇಣ ರೋಗಿಯ ಶ್ವಾಸಕೋಶದ ಆರೋಗ್ಯ ಸುಧಾರಿಸಲಿದ್ದು, ಬಳಿಕ ‘ಎಕ್ಮೋ’ ಸಾಧನ ಬಳಕೆ ನಿಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.