ಜಿಲ್ಲೆ

ತ್ಯಾಜ್ಯ ವಿಲೇವಾರಿ ಘಟಕಕ್ಕೆ ಗ್ರಹಣ

ದೇಶದಲ್ಲಿ ಪ್ರಥಮವಾಗಿ ಸ್ಥಾಪಿತವಾದ ಗೌರಿಬಿದನೂರಿನ ತ್ಯಾಜ್ಯ ವಿಲೇವಾರಿ ಟಕ ಆರು ತಿಂಗಳಿಂದ ಬಂದ್​ ಆಗಿದೆ.

ಸಮರ್ಪಕ ಬಳಕೆಗೆ ಅಧಿಕಾರಿಗಳ ರ್ನಿಲಕ್ಷ್ಯ : ಕೆರೆ, ಕಾಲುವೆ, ಚರಂಡಿ ಪಾಲಾಗುತ್ತಿರುವ ಕಸ


ವಿಜಯವಾಣಿ ಸುದ್ದಿ ಜಾಲ ಗೌರಿಬಿದನೂರು
ಅಧಿಕಾರಿಗಳ ರ್ನಿಲಕ್ಷ್ಯ ಹಾಗೂ ಅಸಮರ್ಪಕ ಬಳಕೆಯಿಂದ ತಾಲೂಕಿನ ಹೊಸೂರು ಗ್ರಾಮದ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಗಿತಗೊಂಡ ಕಾರಣ ತ್ಯಾಜವನ್ನು ಕೆರೆ, ಕುಂಟೆ, ಕಾಲುವೆ ಚರಂಡಿಗಳಲ್ಲಿ ಸುರಿಯುವಂತಾಗಿದೆ.
ದೇಶದಲ್ಲೇ ಪ್ರಥಮ ಬಾರಿಗೆ ಗ್ರಾಮೀಣ ಭಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿದ ಕೀರ್ತಿ ಹೊಸೂರು ಗ್ರಾಮ ಪಂಚಾಯಿತಿಗೆ ಸೇರುತ್ತದೆ. ಜಿಪಂ ಮಾಜಿ ಅಧ್ಯಕ್ಷ ಎಚ್​.ವಿ.ಮಂಜುನಾಥ್​ ತಮ್ಮ ಅವಧಿಯಲ್ಲಿ ವಿಶೇಷ ಕಾಳಜಿ ವಹಿಸಿ ಅಂದಿನ ಜಿಲ್ಲಾಧಿಕಾರಿ ಅನಿವೃದ್ಧ್​ ಶ್ರವಣ್​ ಹಾಗೂ ಜಿಪಂ ಸಿಇಒ ಗುರುದತ್​ ಹೆಗ್ಗಡೆ ಸಹಕಾರದಿಂದ ಶಿಕ್ಷಣ ತಜ್ಞ ದಿ.ಡಾ.ಎಚ್​.ನರಸಿಂಹಯ್ಯ ಅವರ ಗ್ರಾಮದಲ್ಲಿ ಟ್ರಾಷ್ಕಾನ್​ ಸಂಸ್ಥೆ ನೆರವಿನೊಂದಿಗೆ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿದ್ದರು. ಹೀಗೆ ಪ್ರಾರಂಭಿಸಿದ ಟಕವಿಗ ಸ್ಥಗಿತಗೊಂಡಿದ್ದರಿಂದ ತ್ಯಾಜ್ಯ ವಿಲೇವಾರಿಗೆ ಸಮಸ್ಯೆಯಾಗಿದೆ.

ಆರು ತಿಂಗಳಿಂದ ಗ್ರಹಣ
ಹೊಸೂರು, ಸೊನಗಾನಹಳ್ಳಿ ಹಾಗೂ ಮುದುಗೆರೆ ಗ್ರಾಪಂಗಳನ್ನು ಒಳಗೊಂಡಂತೆ ಸ್ಥಾಪಿಸಿದ್ದ ಘಟಕ ಪ್ರಾರಂಭದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಘಟಕಕ್ಕೆ ಭೇಟಿ ನೀಡಿ, ಗ್ರಾಮೀಣ ಭಾಗದಲ್ಲಿ ಆಧುನಿಕ ಮಾದರಿ ಕಸ ವಿಲೇವಾರಿ ಘಟಕ ಸ್ಥಾಪಿಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಪಂಚಾಯಿತಿಗೊಂದು ವಾಹನ ನೀಡಿದ್ದರಿಂದ 3 ಗ್ರಾಪಂಗಳ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ತಂದು ಸಂಸ್ಕರಿಸಲಾಗುತ್ತಿತ್ತು. ಆದರೆ 6 ತಿಂಗಳಿಂದ ಘಟಕ ಸ್ಥಗಿತಗೊಂಡಿದ್ದು, ನಿರ್ವಹಣೆ ಮಾಡುವವರು ಇಲ್ಲದೆ ಸೊರಗುತ್ತಿದೆ.

ಕೆರೆ ಕಾಲುವೆ ಪಾಲಾಗುತ್ತಿದೆ ಕಸ
ಪ್ರತಿ ಮನೆಗೆ ಕಸ ಸಂಗ್ರಹಕ್ಕೆ ಬಕೆಟ್​ ಹಾಗೂ ಪಂಚಾಯಿತಿಗೊಂದು ವಾಹನ ನೀಡಲಾಗಿದೆ. ವಾಹನಗಳು ಪ್ರತಿ ಹಳ್ಳಿಯಲ್ಲಿ ಕಸ ಸಂಗ್ರಹ ಮಾಡಿ ತಂದು ಘಟಕದಲ್ಲಿ ವಿಲೇವಾರಿ ಮಾಡಬೇಕಿತ್ತು. ಘಟಕದಲ್ಲಿ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ಸಂಸ್ಕರಿಸಲಾಗುತ್ತಿತ್ತು. ಆದರೆ ಈಗ ಘಟಕ ಕಾರ್ಯ ಸ್ಥಗಿತಗೊಳಿಸಿದ ಬಳಿಕ ವಾಹನಗಳಲ್ಲಿ ಸಂಗ್ರಹಿಸುವ ಕಸವನ್ನು ತಂದು ಕೆರೆ, ಕಾಲುವೆ, ಇಲ್ಲವೇ ಎಲ್ಲಿ ಖಾಲಿ ಜಾಗಗಳಿರುತ್ತವೆಯೋ ಅಲ್ಲಿಯೇ ಸುರಿದು ಪರಿಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರಿಗಳ ರ್ನಿಲಕ್ಷ್ಯ
ದೇಶದಲ್ಲೇ ಪ್ರಥಮ ಬಾರಿಗೆ ಸ್ಥಾಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿದ್ದ ಹೊಸೂರಿನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಇಂಥ ಸ್ಥಿತಿ ಬಂದೊದಗಲು ಅಧಿಕಾರಿಗಳ ರ್ನಿಲಕ್ಷ್ಯವೇ ಕಾರಣ. ಗ್ರಾಪಂ ಪಿಡಿಒ, ತಾಲೂಕು ಮಟ್ಟದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಆದರೆ, ಘಟಕ ಸ್ಥಗಿತಗೊಂಡು 6 ತಿಂಗಳು ಕಳೆದರೂ ಯಾರೂ ಈ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಎಚ್​.ನರಸಿಂಹಯ್ಯ ಅವರ ಸ್ವಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಬೇಕು ಎಂಬ ಉದ್ದೇಶದಿಂದ ಹೊಸೂರು ಗ್ರಾಪಂ ಕೇಂದ್ರದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಯಿತು. ಈಗ ಘಟಕ ಕಾರ್ಯಸ್ಥಗಿತಗೊಳಿಸಿರುವುದು ವೈಯಕ್ತಿಕವಾಗಿ ನನಗೆ ದು@ಖ ಉಂಟು ಮಾಡಿದೆ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಸಚಿವರು ಹಾಗೂ ಕಾರ್ಯದರ್ಶಿಗೆ ಈ ಬಗ್ಗೆ ಪತ್ರ ಬರೆಯುತ್ತೇನೆ.
ಎಚ್​.ವಿ.ಮಂಜುನಾಥ್​, ಜಿಪಂ ಮಾಜಿ ಅಧ್ಯಕ್ಷ

ಗ್ರಾಪಂ ಪಿಡಿಒ ಅವರಿಗೆ ಘನ ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ಗಮನಹರಿಸುತ್ತಿಲ್ಲ. ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡ ಈ ಬಗ್ಗೆ ಗಮನಹರಿಸಿ ಘಟಕ ಕಾರ್ಯನಿರ್ವಹಣೆಗೆ ಕ್ರಮ ಜರುಗಿಸದಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.

ಅನಿಲ್​ , ಸ್ಥಳಿಯ ನಿವಾಸಿ