ಜಿಲ್ಲೆ

ಯುಜಿಡಿ ಕಾಮಗಾರಿಗೆ ಬಿಡದ ಗ್ರಹಣ!

ಗಂಗಾಧರ ಬಿ ವಿ

* ನನೆಗುದಿಗೆ ಬಿದ್ದಿರುವ ಕಾಮಗಾರಿ ಉಪಚುನಾವಣೆ ನೆಪದಲ್ಲಾದರೂ ಪ್ರಾರಂಭವಾಗುವುದೇ?

*2007ರಲ್ಲಿ 19 ಕೋಟಿ ರೂ. ವೆಚ್ಚದಲ್ಲಿ ಆರಂಭಗೊಂಡ ಕೆಲಸ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ನಗರದ ಯುಜಿಡಿ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈ ಕಾಮಗಾರಿಗೆ ಹಿಡಿದಿರುವ ಗ್ರಹಣ ಉಪಚುನಾವಣೆ ನೆಪದಲ್ಲಾದರೂ ಬಿಡುವುದೇ ಎಂದು ನಗರವಾಸಿಗಳು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ.

ಹೌದು.., ಕಸ ವಿಲೇವಾರಿ ಹಾಗೂ ಯುಜಿಡಿ (ಒಳಚರಂಡಿ) ಚನ್ನಪಟ್ಟಣ ನಗರವನ್ನು ಹಲವು ವರ್ಷಗಳಿಂದ ಕಾಡುತ್ತಿದೆ. ಅಸಮರ್ಪಕ ತ್ಯಾಜ್ಯ

ವಿಲೇವಾರಿ ನಗರದ ಸೌಂದರ್ಯಕ್ಕೆ ಧಕ್ಕೆಯುಂಟು ಮಾಡಿದರೆ, ಯುಜಿಡಿ ನಗರವಾಸಿಗಳ ನೆಮ್ಮದಿ ಕಸಿದುಕೊಂಡಿದೆ. ನಗರದಲ್ಲಿ ಸುಸಜ್ಜಿತವಾದ ಯುಜಿಡಿ (ಒಳಚರಂಡಿ ವ್ಯವಸ್ಥೆ) ಆಗಬೇಕು ಎಂಬುದು ಬಹುದಿನದ ಕನಸಾಗಿದ್ದು, ಇಚ್ಛಾಶಕ್ತಿಯ ಕೊರತೆ ಸೇರಿ ಇನ್ನಿತರ ಕಾರಣಗಳಿಂದ ಯುಜಿಡಿ ಕಾಮಗಾರಿ ಮಕಾಡೆ ಮಲಗಿದೆ.

ಇಂದು ನಿನ್ನೆಯದಲ್ಲ!

ನಗರದ ಮನೆಗಳ ಶೌಚದ ನೀರು ಚರಂಡಿಗಳಲ್ಲಿ ಹರಿಯಬಾರದೆಂಬ ಉದ್ದೇಶದಿಂದ ಚನ್ನಪಟ್ಟಣ ನಗರಸಭೆಯಿಂದ ಅಂದಾಜು 19 ಕೋಟಿ ರೂ. ವೆಚ್ಚದ ಯುಜಿಡಿ ಕಾಮಗಾರಿಗೆ 2007ರಲ್ಲಿ ಚಾಲನೆ ನೀಡಲಾಗಿತ್ತು. ಆರಂಭದಲ್ಲಿ ಈ ಕಾಮಗಾರಿ ಭರದಿಂದ ಸಾಗಿ ಮೊದಲ ಹಂತವಾಗಿ ಪೈಪ್‌ಲೈನ್ ಹಾಗೂ ಚೇಂಬರ್ ಅಳವಡಿಸಲಾಯಿತು. ತದನಂತರ ಕುಂಟುತ್ತಾ, ತೆವಳುತ್ತ ಸಾಗಿ, 2013ರಲ್ಲಿ ಕಾಮಗಾರಿ ಪೂರ್ಣಗೊಂಡ ಮನೆಗಳಿಗೆ ಯುಜಿಡಿ ಲಿಂಕ್ ಮಾಡಲಾಯಿತು. ಶೇ.75 ಪೈಪ್‌ಲೈನ್ ಹಾಗೂ ಚೇಂಬರ್ ಕೆಲಸ ಮುಗಿದಿತ್ತು. ಆದರೆ, ಯುಜಿಡಿ ವೆಟ್‌ವೆಲ್ (ಸಂಗ್ರಹ) ಜಾಗ ಗುರುತಿಸಲು ವಿಫಲವಾದ ಕಾರಣ ಈ ಕಾಮಗಾರಿ ನನೆಗುದಿಗೆ ಬಿತ್ತು. ಕಾಮಗಾರಿ ಆರಂಭಕ್ಕೂ ಮುನ್ನ ವೆಟ್‌ವೆಲ್ ಜಾಗದ ಬಗ್ಗೆ ಗಮನಹರಿಸದೇ, ಕೊನೇಕ್ಷಣದಲ್ಲಿ ತೆಗೆದುಕೊಂಡ ಕ್ರಮಗಳು ಕಾಮಗಾರಿ ಹಳ್ಳ ಹಿಡಿಯಲು ಕಾರಣ ಎನ್ನಲಾಗಿದೆ.

ಉಪಚುನಾವಣೆ ನೆಪದಲ್ಲಾದರೂ ಈಡೇರುವುದೇ?

ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ಅವೈಜ್ಞಾನಿಕ ತೀರ್ಮಾನಗಳಿಂದ ಉದ್ದೇಶಿತ ಯುಜಿಡಿ ಕಾಮಗಾರಿ ಹಳ್ಳ ಹಿಡಿದಿದೆ ಎಂದರೆ ತಪ್ಪಾಗಲಾರದು. ಪ್ರತಿಚುನಾವಣೆಯಲ್ಲೂ ಈ ಕಾಮಗಾರಿ ಚಾಲ್ತಿಗೆ ಬರುತ್ತಲೇ ಇರುತ್ತದೆ. ಆದರೆ, ಇದರ ಮುಕ್ತಾಯ ಯಾವಾಗ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. 19 ಕೋಟಿ ರೂ. ವೆಚ್ಚದಲ್ಲಿ ಆರಂಭಗೊಂಡ ಈ ಕಾಮಗಾರಿಗೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 90 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ, ವೆಟ್‌ವೆಲ್ ಜಾಗದ ಸ್ವಾಧೀನ ಸೇರಿ ಕೆಲಕಾರಣಗಳಿಂದ ಈ ಕಾಮಗಾರಿಗೆ ಮತ್ತೆ ಜೀವ ಬರುತ್ತಿಲ್ಲ. ಕೆಲವೇ ದಿನಗಳಲ್ಲಿ ಕ್ಷೇತ್ರಕ್ಕೆ ಮತ್ತೊಂದು ಉಪಚುನಾವಣೆ ಎದುರಾಗುತ್ತಿದ್ದು, ಈಗಲಾದರೂ ಬಹುದಿನ ಆಶಯ ಈಡೇರುವುದೇ ಎಂದು ನಗರವಾಸಿಗಳು ಆಸೆಗಣ್ಣಿನಿಂದ ನೋಡುತ್ತಿದ್ದಾರೆ.

ಭೂ ಸ್ವಾಧೀನವಾಗಬೇಕಿದೆ!

ಯುಜಿಡಿ ಕಾಮಗಾರಿಗೆ ಅಗತ್ಯವಾಗಿರುವ ವೆಟ್‌ವೆಲ್‌ಗಳ ನಿರ್ಮಾಣಕ್ಕೆ ನಗರಸಭೆಯಿಂದ ಗುರುತಿಸಿರುವ ಖಾಸಗಿ ಜಾಗಗಳನ್ನು ಸರ್ಕಾರದಿಂದ ಭೂ-ಸ್ವಾಧೀನ ಮಾಡಿಕೊಳ್ಳಲು ನಗರಸಭೆಯಿಂದ 11 ತಿಂಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಈ ಬಗ್ಗೆ ಅಧಿಕಾರಿಗಳು ಹಾಗೂ ನಗರಸಭೆ ಆಡಳಿತ ಮಂಡಳಿ ಸರ್ಕಾರದ ಗಮನ ಸೆಳೆಯದ ಕಾರಣ ಈವರೆಗೆ ಭೂ-ಸ್ವಾಧೀನ ಪ್ರಕ್ರಿಯೆ ಮಾಡಲು ಸಾಧ್ಯವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಡಿಸಿಎಂ ಈ ಬಗ್ಗೆ ಕೊಂಚ ಗಮನಹರಿಸಿದರೆ ಯುಜಿಡಿ ಸಮಸ್ಯೆಗೆ ಮುಕ್ತಿ ದೊರಕಿಸಬಹುದಾಗಿದೆ. ಉಪಚುನಾವಣೆ ಕಾಲಘಟ್ಟದಲ್ಲಿ ಈ ಮಹತ್ತರವಾದ ಕಾಮಗಾರಿ ಆರಂಭಗೊಂಡರೆ ಸಾಕು ಎನ್ನುವುದು ನಗರವಾಸಿಗಳ ಆಶಯವಾಗಿದೆ.

ಕಳೆದ 17 ವರ್ಷಗಳಿಂದ ಯುಜಿಡಿ ಕಾಮಗಾರಿ ಕುಂಟುತ್ತಾ ಸಾಗಿದೆ. ಯುಜಿಡಿ ಕಾಮಗಾರಿಗೆ ಅಗತ್ಯವಾಗಿರುವ ವೆಟ್‌ವೆಲ್‌ಗಳ ನಿರ್ಮಾಣಕ್ಕೆ ಸರ್ಕಾರಿ ಜಾಗ ಇಲ್ಲವಾಗಿದ್ದು, ಈ ನಿಟ್ಟಿನಲ್ಲಿ ಖಾಸಗಿ ಜಮೀನು ಖರೀದಿ ಪ್ರಕ್ರಿಯೆ ಅವಶ್ಯಕವಾಗಿದೆ. ಜಲ ಮಂಡಳಿ ಅಧಿಕಾರಿಗಳು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಂಟಿ ಪರಿಶೀಲನೆ ಮಾಡಿ ಕೆಲವು ಜಾಗ ಗುರುತಿಸಲಾಗಿದೆ. ಆದರೆ, ಈ ಜಾಗವನ್ನು ಸರ್ಕಾರದಿಂದ ಭೂ-ಸ್ವಾಧೀನ ಮಾಡಿಕೊಳ್ಳುವ ಭೂ-ಸ್ವಾಧೀನ ಇಲಾಖೆಗೆ 11 ತಿಂಗಳ ಹಿಂದೆಯೇ ನಗರಸಭೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಈವರೆಗೆ ಜಮೀನು ಖರೀದಿ ಮಾಡದ ಕಾರಣ ಕಾಮಗಾರಿಗೆ ಚಾಲನೆ ನೀಡಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಮನಸ್ಸು ಮಾಡಬೇಕು.

ಜೆಸಿಬಿ ಲೋಕೇಶ್

ನಗರಸಭೆ ಮಾಜಿ ಸದಸ್ಯ

ಯುಜಿಡಿ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಚರಂಡಿ ಸೇರಿ ರಾಜಕಾಲುವೆಗಳಿಗೆ ಮನೆಯ ಶೌಚಗೃಹ ಗಲೀಜನ್ನು ಬಿಡಲಾಗುತ್ತಿದೆ. ಇದರಿಂದ ರಸ್ತೆಗಳಲ್ಲಿ ಸಂಚಾರ ಮಾಡಲು ಆಗದ ಸ್ಥಿತಿಯಿದೆ. ಯುಜಿಡಿ ಪೈಪ್ ಲೈನ್‌ಗಳು ತುಂಬುವ ಕಾರಣ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸಂಬಂಧಿಸಿದವರು ಈ ಕಾಮಗಾರಿಯ ಬಗ್ಗೆ ಆಸಕ್ತಿವಹಿಸಿ, ನಗರದ ಜನತೆಯ ಆರೋಗ್ಯ ಕಾಪಾಡಬೇಕು.

ಕೃಷ್ಣಪ್ಪ

ಮಂಜುನಾಥ್ ನಗರ ನಿವಾಸಿ