ವಿಜಯಪುರ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯ ರಾಜಶೇಖರ ಮಗಿಮಠ ವಿಜಯವಾಣಿ ವರದಿ ಉಲ್ಲೇಖಿಸಿ ಮಾತನಾಡಿದರು. 
ಜಿಲ್ಲೆ

ಮಹಾನಗರ ಪಾಲಿಕೆ ಸಭೆಯಲ್ಲಿ ‘ವಿಜಯವಾಣಿ’ ಪ್ರತಿಧ್ವನಿ, ಭೂ ದಾಖಲೆ ಗೋಲ್‌ಮಾಲ್ ತನಿಖೆಗೆ ಆಗ್ರಹ-ಎಫ್‌ಐಆರ್‌ಗೆ ಒತ್ತಾಯ

ವಿಜಯಪುರ: ಮುಳುಗಡೆ ಸಂತ್ರಸ್ತರ ಜಮೀನಿನ ದಾಖಲೆಯಲ್ಲಿ ಗೋಲ್‌ಮಾಲ್ ಮಾಡಲೆತ್ನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ‘ಸಂತ್ರಸ್ತರ ನಿವೇಶನದ ಮೇಲೂ ಕಾಕದೃಷ್ಠಿ !’ ತಲೆ ಬರಹದಡಿ ‘ವಿಜಯವಾಣಿ’ಯಲ್ಲಿ ಪ್ರಕಟಗೊಂಡಿದ್ದ ವಿಶೇಷ ವರದಿ ಉಲ್ಲೇಖಿಸಿ ಪಾಲಿಕೆ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆಗೆ ಒತ್ತಾಯಿಸಿದರು.

ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯ ಆರಂಭದಲ್ಲಿಯೇ ಸದಸ್ಯ ರಾಜಶೇಖರ ಮಗಿಮಠ ಹಾಗೂ ಶಿವರುದ್ರ ಬಾಗಲಕೋಟ ಸೇರಿದಂತೆ ಹಲವರು ಸಂತ್ರಸ್ತರ ಜಮೀನಿಗೆ ಕನ್ನ ಹಾಕಲೆತ್ನಿಸಿದ ವಿಚಾರ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಈಗಾಗಲೇ ಪತ್ರಿಕೆಯ ವರದಿ ಆಧರಿಸಿ ಸಮಗ್ರ ಮಾಹಿತಿ ನೀಡಲು ಲಿಖಿತವಾಗಿ ಕೇಳಿದರೂ ಅಧಿಕಾರಿಗಳಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಹರಿಹಾಯ್ದರು.

ಸಭೆಗೂ ಮುನ್ನವೇ ಸದಸ್ಯರಿಗೆ ಮಾಹಿತಿ ನೀಡಬೇಕಿತ್ತು. ಈವರೆಗೆ ಮಾಹಿತಿ ನೀಡಿಲ್ಲವೆಂದರೆ ಏನರ್ಥ? ಅಷ್ಟಕ್ಕೂ ಪ್ರಕರಣದ ಹಕೀಕತ್ತು ಏನು? ಇದರ ಹಿಂದೆ ಯಾರಿದ್ದಾರೆ? ನಮೂನೆ -2 ನ್ನು ಖೊಟ್ಟಿಯಾಗಿ ನೀಡಿದ ಆರೋಪ ಇದ್ದು, ಸಮರ್ಪಕ ಮಾಹಿತಿ ನೀಡುತ್ತಿಲ್ಲವೇಕೆ? ಎಂದು ಸದಸ್ಯ ರಾಜಶೇಖರ ಮಗಿಮಠ ಪ್ರಶ್ನಿಸಿದರಲ್ಲದೇ ಸಭೆಯಲ್ಲಿಯೇ ಸ್ಪಷ್ಟ ಮಾಹಿತಿ ನೀಡಲು ಪಟ್ಟು ಹಿಡಿದರು.

ಅಧಿಕಾರಿಗಳ ತರಾಟೆಗೆ

ಆಯುಕ್ತ ವಿಜಯಕುಮಾರ ಮೆಕ್ಕಳಕಿ ಪ್ರತಿಕ್ರಿಯಿಸುತ್ತಾ, ಈಗಾಗಲೇ ತಮ್ಮ ಲಿಖಿತ ಅರ್ಜಿಗೆ ಉತ್ತರ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದೇ ರೀತಿ ಬಹಳಷ್ಟು ಸದಸ್ಯರು ಮಾಹಿತಿ ಕೇಳಿದ್ದಾರೆ. ಆ ಬಗ್ಗೆ ಎಲ್ಲರಿಗೂ ಉತ್ತರ ನೀಡಲಾಗುವುದು ಎಂದರು.

ಸಭೆಯಲ್ಲಿಯೇ ಸಂಬಂಧಿಸಿದ ಅಧಿಕಾರಿ ಮಾಹಿತಿ ನೀಡಲಿ ಎಂದು ಆಗ್ರಹಿಸಲಾಗಿ, ಸಂಬಂಧಿಸಿದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸುತ್ತಾ, ಈಗಾಗಲೇ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲರಿಗೂ ಮಾಹಿತಿ ನೀಡುವುದಾಗಿ ತಿಳಿಸಿದರು. ಆಗ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಆಯುಕ್ತರು, ಸದಸ್ಯರ ಪ್ರಶ್ನೆಗೆ ತ್ವರಿತವಾಗಿ ಉತ್ತರ ನೀಡದೇ ಇದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಅಲ್ಲದೇ, ಮಾಹಿತಿ ನೀಡಲು ವಿಳಂಬ ಮಾಡಿದ್ದೇಕೆ ಎಂದು ತರಾಟೆಗೆ ತೆಗೆದುಕೊಂಡರು. ಜೊತೆಗೆ ವಿಳಂಬ ಮಾಡಿದ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳುವುದಾಗಿ ಸದಸ್ಯರಿಗೆ ಸಮಜಾಯಿಷಿ ನೀಡಿದರು.

ಕಾಣದ ಕೈಗಳ ಕವಾಡದ ಶಂಕೆ

ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿ, ಪ್ರಕರಣದಲ್ಲಿ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ಸಹ ಶಾಮೀಲಾಗಿರುವ ಶಂಕೆ ಇದೆ. ಸುಮಾರು 4000 ನಿವೇಶನಗಳು ಪಾಲಿಕೆಗೆ ಹಸ್ತಾಂತರವಾಗಿವೆ. ಅಂಥ ಮಹತ್ವದ ನಿವೇಶನಗಳ ದಾಖಲೆಗಳನ್ನು ಬೇಕಾ ಬಿಟ್ಟಿ ಕೊಡಲು ಅವಕಾಶ ಇದೆಯಾ? ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಹಿರಿಯ ಅಧಿಕಾರಿಗಳು ಶಾಮೀಲು ಇಲ್ಲದೇ ಇಷ್ಟೆಲ್ಲಾ ನಡೆಯಲು ಸಾಧ್ಯವಿಲ್ಲ. ಕೇವಲ ಅಮಾಯಕ ಸಿಬ್ಬಂದಿ ಮೇಲೆ ಕ್ರಮ ಕೈಗೊಂಡಿದ್ದೀರಿ. ಈ ಬಗ್ಗೆ ಸಮಗ್ರ ತನಿಖೆಗೆ ತಂಡ ರಚಿಸಬೇಕು. ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದರು.

ಎಫ್‌ಐಆರ್ ದಾಖಲಿಸಲು ಕ್ರಮ

ಮುಳುಗಡೆ ಸಂತ್ರಸ್ತರ ಜಮೀನುಗಳ ದಾಖಲೆಗೆ ಸಂಬಂಧಿಸಿದಂತೆ ಈಗಾಗಲೇ ಕೃಷ್ಣಾ ಭಾಗ್ಯ ಜಲನಿಗಮದ ಪುನರ್ ನಿರ್ಮಾಣ ಮತ್ತು ಪುನರ್‌ವಸತಿ ಅಧಿಕಾರಿಗಳ ಜೊತೆ ಪತ್ರ ವ್ಯವಹಾರ ನಡೆಸಲಾಗಿದೆ. ಮೂಲ ದಾಖಲೆಗಳನ್ನು ತರಿಸಿಕೊಳ್ಳಲಾಗುತ್ತಿದೆ. ಆ ಬಗ್ಗೆ ಸಮಗ್ರವಾಗಿ ಪರಿಶೀಲಿಸಲಾಗುವುದು. ಯಾವುದೇ ಕಾರಣಕ್ಕೂ ಸಂತ್ರಸ್ತರಿಗೆ ಅನ್ಯಾಯವಾಗದಂತೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆಯುಕ್ತ ವಿಜಯಕುಮಾರ ಮೆಕ್ಕಳಕಿ ತಿಳಿಸಿದರು.

ಇನ್ನು ಸಂಬಂಧಿಸಿದ ವಲಯ ಅಧಿಕಾರಿಯೊಬ್ಬರು ಮಾತನಾಡಿ, ನಾಲ್ಕು ಹಂತದಲ್ಲಿ ಫೋರ್ಜರಿ ಆಗಿರುವುದು ಗಮನಕ್ಕೆ ಬಂದಿದೆ. ಕ್ಯೂ ಆರ್ ಕೋಡ್, ಸಹಿ ಮತ್ತಿತರ ಅಂಶಗಳೆಲ್ಲವೂ ಬೇರೆ ಬೇರೆಯಾಗಿರುವುದು ಕಂಡು ಬಂದಿದೆ. ಉತಾರೆಗಳು ಸಹ ಬೇರೆ ಬೇರೆಯಾಗಿವೆ. ಪರಿಶೀಲಿಸುತ್ತಿರುವುದಾಗಿ ತಿಳಿಸಿದರು. ಕೊನೆಗೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲು ಮತ್ತು ಎಫ್‌ಐಆರ್ ದಾಖಲಿಸುವ ತೀರ್ಮಾನದೊಂದಿಗೆ ಚರ್ಚೆಗೆ ತೆರೆ ಎಳೆಯಲಾಯಿತು.