ಅರಕಲಗೂಡು: ಉತ್ತಮ ಆರೋಗ್ಯ ಹೊಂದಲು ಪೌಷ್ಟಿಕ ಆಹಾರ ಸೇವನೆ ಅವಶ್ಯ ಎಂದು ನ್ಯಾಯಾಧೀಶ ಬಿ.ಕೆ. ನಾಗೇಶಮೂರ್ತಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಆಡಳಿತ ಸಹಯೋಗದಲ್ಲಿ ಪಟ್ಟಣದ ದೇವರಾಜ ಅರಸು ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಪೌಷ್ಟಿಕ ಆಹಾರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಅಪೌಷ್ಟಿಕತೆ ದೂರವಾಗಬೇಕಾದರೆ ಪೌಷ್ಟಿಕ ಆಹಾರ ಸೇವನೆ ಅಗತ್ಯ. ಹಣ್ಣು, ಸೊಪ್ಪು, ತರಕಾರಿಗಳನ್ನು ಹೆಚ್ಚಾಗಿ ಬಳಸಬೇಕು ಎಂದರು.
ಸಿಡಿಪಿಒ ವೆಂಕಟೇಶ್ ಮಾತನಾಡಿ, ಆರೋಗ್ಯವಂತರಾಗಿರಲು ದೈಹಿಕ ಚಟುವಟಿಕೆ ಹಾಗೂ ಒತ್ತಡಮುಕ್ತ ಜೀವನ ಸಾಗಿಸಬೇಕು. ಆರೋಗ್ಯವಾಗಿದ್ದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಕಸಬಾ ವಲಯದ ಮಹಿಳೆಯರು ವಿವಿಧ ಪೌಷ್ಟಿಕಾಂಶಯುಕ್ತ ಆಹಾರ ಸಿದ್ಧಪಡಿಸಿ ಪ್ರದರ್ಶನಕ್ಕಿಟ್ಟಿದ್ದರು. ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ನೆರವೇರಿಸಲಾಯಿತು. ನರೇಗಾ ಯೋಜನಾಧಿಕಾರಿ ಡಿ.ಡಿ.ಪ್ರಕಾಶ್, ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಗಿರೀಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಮಾತನಾಡಿದರು. ನ್ಯಾಯಾಧೀಶ ಎಂ.ರಘು, ವಕೀಲರ ಸಂಘದ ಕಾರ್ಯದರ್ಶಿ ರಂಗನಾಥ್, ಜಂಟಿ ಕಾರ್ಯದರ್ಶಿ ಚಿತ್ರಾ ಲಾವಣ್ಯ, ಅಂಗನವಾಡಿ ಶಿಕ್ಷಕರು, ಕಾರ್ಯಕರ್ತೆಯರು ಇದ್ದರು.