ವಿಜಯಪುರ :ಆರೋಗ್ಯಕರ ಜೀವನ ನಡೆಸಲು ಪೌಷ್ಠಿಕಾಂಶವುಳ್ಳ ಆಹಾರ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವುದು ವಿಶ್ವ ಆಹಾರ ದಿನದ ಮುಖ್ಯ ಉದ್ದೇಶವಾಗಿದೆ. ಅಪೌಷ್ಠಿಕಾಂಶ ಮತ್ತು ಬಡತನವನ್ನು ಎದುರಿಸಲು ನಾಗರಿಕ ಸಮಾಜದ ವಿವಿಧ ಸಂಸ್ಥೆಗಳು ಕೆಲಸ ಮಾಡಬೇಕಿದೆ ಎಂದು ಕೃಷಿ ಮಹಾವಿದ್ಯಾಲಯದ ಕೃಷಿ ವಿಸ್ತರಣಾ ಸಹ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಹೇಳಿದರು.
ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಸಿವಿನ ವಿರುದ್ಧ ಪಾಲಕರು ಮತ್ತು ಸಮಾಜ ಒಟ್ಟಾಗಿ ಹೋರಾಡಬೇಕಿದೆ. ಶಿಕ್ಷಣದ ಮೂಲಕ ಮಹಿಳೆಯರ ಸಬಲೀಕರಣ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ಭಾರತೀಯ ಸಿರಿಧಾನ್ಯ ಸಂಸ್ಥೆಯ ವಿಜ್ಞಾನಿ ಡಾ.ಸಂಗಪ್ಪ ಮಾತನಾಡಿ, ಸಿರಿಧಾನ್ಯ ಉತ್ಪಾದನೆಗೆ ಉತ್ತೇಜಿಸುವುದು ಹಾಗೂ ಮಹಿಳೆಯರಿಗೆ ಸಿರಿಧಾನ್ಯ ಮೌಲ್ಯವರ್ಧನೆ ಬಗ್ಗೆ ಸಾಮರ್ಥ್ಯ ಹೆಚ್ಚಿಸುವುದರ ಕುರಿತು ಮಾಹಿತಿ ನೀಡಿದರು.
ತೋಟಗಾರಿಕಾ ರೈತ ಉತ್ಪಾದನೆ ಸಂಸ್ಥೆ ಯೋಜನಾಧಿಕಾರಿ ಅಶೋಕ ಸಜ್ಜನ ಮಾತನಾಡಿ, ಔಷಧ ಆಹಾರವಾಗದೆ ಆಹಾರ ಔಷಧವಾಗಬೇಕು. ಈ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಶುಭಾ .ಎಸ್, ಬಿ.ಸಿ.ಕೊಲ್ಹಾರ, ಬಿ.ಎಸ್.ನವಲಿ ಇತರರು ಉಪಸ್ಥಿತರಿದ್ದರು.