ಬಿಸರಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಪೋಷಣಾ ಮಾಸಾಚರಣೆ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟಪ್ಪನವರ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಮಲ್ಲಯ್ಯ ಮಠದ, ಸಿಡಿಪಿಒ ರೋಹಿಣಿ, ಎಸಿಡಿಪಿಒ ರೂಪಾ, ಪಿಡಿಒ ಶ್ರೀನಿವಾಸ, ವೈದ್ಯಾಧಿಕಾರಿ ಇರ್ಫಾನ್ ಅಂಜುಮ್ ಇತರರಿದ್ದರು. 
ಜಿಲ್ಲೆ

ಪೌಷ್ಟಿಕ ಆಹಾರ ಸೇವಿಸಿ ಸ್ವಸ್ಥ ಸಮಾಜ ನಿರ್ಮಿಸಿ

ಅಳವಂಡಿ: ಮಕ್ಕಳು, ಯುವತಿಯರು, ಗರ್ಭಿಣಿ ಮತ್ತು ಬಾಣಂತಿಯರ ಪೌಷ್ಟಿಕಾಂಶದ ಸ್ಥಿತಿ ಸುಧಾರಿಸಲು ಪೋಷಣ ಅಭಿಯಾನ ಜಾರಿಗೊಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟಪ್ಪನವರ ಹೇಳಿದರು.

ಸಮೀಪದ ಬಿಸರಹಳ್ಳಿಯಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ಗ್ರಾಪಂ ಬಿಸರಹಳ್ಳಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೋಷಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಪೌಷ್ಟಿಕತೆ, ಕುಂಠಿತ ಬೆಳವಣಿಗೆ ಮತ್ತು ರಕ್ತಹೀನತೆ ಕಡಿಮೆ ಮಾಡುವುದು, ಮಹಿಳೆಯರು ತಮ್ಮ ಆರೋಗ್ಯದ ಜತೆ ಮಕ್ಕಳ ಆರೋಗ್ಯವನ್ನು ಸುಧಾರಿಸಿ ಸ್ವಸ್ಥ ಸಮಾಜ ನಿರ್ಮಿಸುವುದು, ಮಹಿಳೆಯರು, ಮಕ್ಕಳನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಮಲ್ಲಯ್ಯ ಮಠದ ಮಾತನಾಡಿ, ರಾಷ್ಟ್ರೀಯ ಪೋಷಣ ಅಭಿಯಾನ ಅಪೌಷ್ಟಿಕಮುಕ್ತ ಸಮಾಜ ನಿರ್ಮಿಸುವ ಉದ್ದೇಶ ಹೊಂದಿದ್ದು, ಫಲಾನುಭವಿಗಳು ಸೌಲಭ್ಯಗಳ ಸಮರ್ಪಕ ಬಳಕೆಯಿಂದ ಆರೋಗ್ಯ ಕಾಪಾಡಿಕೊಳ್ಳಿ ಎಂದರು.

ಸಿಡಿಪಿಒ ರೋಹಿಣಿ ಮಾತನಾಡಿ, ಗರ್ಭಿಣಿ, ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸಬೇಕು. ಮೊಳಕೆ ಕಾಳು, ತರಕಾರಿ, ಹಣ್ಣು ಹಂಪಲು ತಿನ್ನಬೇಕು. ಗರ್ಭಿಣಿ, ಬಾಣಂತಿಯರು ಸಕಾಲಕ್ಕೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಹಾಗೂ ವೈದ್ಯರ ಸಲಹೆ ಪಾಲಿಸಬೇಕು. ತಾಯಿ ಹಾಗೂ ಮಗುವಿನ ದೇಹದ ಸರ್ವಾಂಗೀಣ ಅಭಿವೃದ್ಧಿಗೆ ಪೌಷ್ಟಿಕ ಆಹಾರ ಮುಖ್ಯ ಎಂದು ತಿಳಿಸಿದರು.

ಎಸಿಡಿಪಿಒ ರೂಪಾ, ಪಿಡಿಒ ಶ್ರೀನಿವಾಸ, ವೈದ್ಯಾಧಿಕಾರಿ ಇರ್ಫಾನ್ ಅಂಜುಮ್, ಅಂಗನವಾಡಿ ಮೇಲ್ವಿಚಾರಕಿಯರಾದ ಪ್ರೀತಿ ಕೋರೆ, ರೆಹಮತ್ ಬೀ, ಚಂದ್ರಮ್ಮ, ಬಸವಲಿಂಗಮ್ಮ, ಪ್ರಮುಖರಾದ ರಮೇಶ ಮೂಲಿಮನಿ, ಪಾರ್ವತಿ ಬಿಕನಳ್ಳಿ, ಅನ್ನಪೂರ್ಣ, ವಿಶಾಲಾಕ್ಷಿ, ನಾಗಪ್ಪ, ಶರಣಪ್ಪ ಗದ್ದಿ, ಹಾಲಪ್ಪ ಇತರರಿದ್ದರು.