ಉಪ್ಪಿನಬೆಟಗೇರಿ: ಮನುಷ್ಯ ಆರೋಗ್ಯದಿಂದಿರಲು ಪ್ರತಿ ನಿತ್ಯ ವ್ಯಾಯಾಮ, ಮಿತ ಆಹಾರ ಹಾಗೂ ಅಧಿಕ ನೀರು ಸೇವಿಸಬೇಕು ಎಂದು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ನೀಲಮ್ಮ ಎನ್. ಹೇಳಿದರು.
ಸಮೀಪದ ತಡಕೋಡ ಗ್ರಾಮದ ಉಪಾಸಗೇರಿ ಓಣಿಯ ಗಣೇಶ ದೇವಸ್ಥಾನದಲ್ಲಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗಾಗಿ ಮಂಗಳವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು. ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಈರಣ್ಣ ಬಾರಕೇರ ಮಾತನಾಡಿ, ಕೆಲ ಹಿರಿಯ ಜೀವಿಗಳು ಆಸ್ಪತ್ರೆಗೆ ಹೋಗಲಾರದ ಕಾರಣ ಅವರ ಶರೀರದಲ್ಲಿ ಆಗುವ ಬದಲಾವಣೆಗಳ ಅರಿವಿನ ಕೊರತೆಯಿಂದಾಗಿ ರೋಗಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಅವರ ಮನೆ ಬಾಗಿಲಿಗೆ ಆರೋಗ್ಯ ಎಂಬಂತೆ ಸರ್ಕಾರಗಳು ಉಚಿತವಾಗಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಆರೋಗ್ಯ ತಪಾಸಣೆ ಮಾಡುವ ಮೂಲಕ ಕಾಳಜಿ ವಹಿಸುತ್ತಿದ್ದಾರೆ. ಜೊತೆಗೆ ಉಚಿತವಾಗಿ ಔಷಧ ವಿತರಣೆ ಮಾಡುತ್ತಿದ್ದು, ಇಂಥ ಶಿಬಿರಗಳ ಪ್ರಯೋಜನ ಪಡೆಯುವ ಮೂಲಕ ತಮ್ಮ ಆರೋಗ್ಯ ಸಂಪತ್ತನ್ನು ಕಾಪಾಡಿಕೊಳ್ಳಬೇಕು ಎಂದರು.
ಶಿಬಿರದಲ್ಲಿ ವಿ.ಆರ್.ಡಬ್ಲ್ಯು ವೀರನಗೌಡ ಮರಿಗೌಡರ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಹಾಗೂ ಗ್ರಾಮಸ್ಥರು, ಇತರರಿದ್ದರು.