ತಾವರಗೇರಾದಲ್ಲಿ ಅಯೋಡಿನ್ ಉಪ್ಪು ಕೊರತೆಯಿಂದಾಗುವ ಸಮಸ್ಯೆಗಳ ನಿವಾರಣಾ ಸಪ್ತಾಹ ದಿನದ ಜಾಗೃತಿ ಜಾಥಾ ನಡೆಯಿತು. ಹಿರಿಯ ಆರೋಗ್ಯ ಸಹಾಯಕಿ ಶಂಕ್ರಮ್ಮ, ವೈದ್ಯಾಧಿಕಾರಿ ಸ್ಮಿತಾ, ಆರೋಗ್ಯಾಧಿಕಾರಿ ಸೀತಾ ಪಾಟೀಲ್, ಅರುಣಕುಮಾರ, ಮಹೇಶ ಅಂಗಡಿ, ಅಬ್ದುಲ್ ರಜಾಕ್, ಮರೇಶ ಇದ್ದರು. 
ಜಿಲ್ಲೆ

ಅಯೋಡಿನ್‌ಯುಕ್ತ ಉಪ್ಪು ಸೇವಿಸಿ

ಗಾಯತ್ರಿ ಮಾಲಿಪಾಟೀಲ್

ತಾವರಗೇರಾ: ಆರೋಗ್ಯಕರ ಜೀವನಕ್ಕೆ ಪೌಷ್ಟಿಕ ಆಹಾರ ಸೇವನೆ ಮುಖ್ಯ ಎಂದು ಹಿರಿಯ ಆರೋಗ್ಯ ಸಹಾಯಕಿ ಶಂಕ್ರಮ್ಮ ಹೇಳಿದರು.

ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ಪಪಂ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಅಯೋಡಿನ್ ಉಪ್ಪು ಕೊರತೆಯಿಂದಾಗುವ ಸಮಸ್ಯೆಗಳ ನಿವಾರಣಾ ಸಪ್ತಾಹ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿನಿತ್ಯ ಆಹಾರದಲ್ಲಿ ಅಯೋಡಿನ್ ಯುಕ್ತ ಉಪ್ಪು ಸೇವನೆಯಿಂದ ಅಯೋಡಿನ್ ಕೊರತೆಯಿಂದಾಗುವ ನ್ಯೂನತೆ ತಡೆಗಟ್ಟಬೇಕು ಎಂದರು.

ವೈದ್ಯಾಧಿಕಾರಿ ಸ್ಮಿತಾ ಮಾತನಾಡಿ, ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ಗಳಗಂಡ, ಬುದ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತ, ಕಿವುಡು ಮತ್ತು ಮೂಗತನ, ನಡಿಗೆಯಲ್ಲಿ ದೋಷ ಕಂಡುಬರುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಪೌಷ್ಟಿಕ ಆಹಾರದ ಜತೆಗೆ ಅಯೋಡಿನ್ ಯುಕ್ತ ಉಪ್ಪು ಸೇವನೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಸಮುದಾಯ ಆರೋಗ್ಯಾಧಿಕಾರಿ ಸೀತಾ ಪಾಟೀಲ್ ಮಾತನಾಡಿ, ಅಯೋಡಿನ್ ಕೊರತೆಯಿಂದಾಗಿ ಗರ್ಭಿಣಿಯರಲ್ಲಿ ಗರ್ಭಪಾತ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರ ಬಗ್ಗೆ ಜಾಗೃತರಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರು.

ಆರೋಗ್ಯ ಇಲಾಖೆಯ ಅರುಣಕುಮಾರ, ಜೈರಾಜ, ಪಪಂ ಮುಖ್ಯಾಧಿಕಾರಿ ಮಹೇಶ ಅಂಗಡಿ, ಸಿಬ್ಬಂದಿ ಅಬ್ದುಲ್ ರಜಾಕ್, ಖಾಜಾಹುಸೇನ್, ಮರೇಶ ನಾಯ್ಕ, ಪಪಂ ಸದಸ್ಯರು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.