ಜಿಲ್ಲೆ

ಪೂರ್ವ-ಪಶ್ಚಿಮ ಟನಲ್ ರಸ್ತೆ: ಡಿಪಿಆರ್‌ ರಚಿಸಲು ಟೆಂಡರ್

ಬೆಂಗಳೂರು: ಮಹಾನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಸುರಂಗ ರಸ್ತೆ ನಿರ್ಮಿಸುವ ಭಾಗವಾಗಿ ಪಾಲಿಕೆಯು ಪೂರ್ವ-ಪಶ್ಚಿಮ ಟನಲ್ ಮಾರ್ಗಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸಮಾಲೋಚಕರಿಂದ ಸೇವೆ ಪಡೆಯಲು ಟೆಂಡರ್ ಆಹ್ವಾನಿಸಿದೆ.

ಇತ್ತೀಚಿಗಷ್ಟೇ ಉತ್ತರ - ದಕ್ಷಿಣ ಟನಲ್ ಮಾರ್ಗ ನಿರ್ಮಿಸಲು ಖಾಸಗಿ ಹಣಕಾಸು ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವ ಭರವಸೆ ದೊರೆತ ಬೆನ್ನಲ್ಲೇ, ಪೂರ್ವ-ಪಶ್ಚಿಮ ಮಾರ್ಗದ ಟನಲ್ ಯೋಜನೆ ಕೈಗೆತ್ತಿಕೊಳ್ಳಲು ಪಾಲಿಕೆ ಮುಂದಾಗಿದೆ. ಇದಕ್ಕಾಗಿ ಅಲ್ಪಾವಧಿ ಟೆಂಡರ್ ಆಹ್ವಾನಿಸಿದ್ದು, ಈ ತಿಂಗಳ 29ರ ಸಂಜೆಯಿಂದ ಟೆಂಡರ್ ದಾಖಲೆ ಪಡೆದು ಫೆ.11ರೊಳಗೆ ಸಲ್ಲಿಸಲು ಗಡುವು ವಿಧಿಸಲಾಗಿದೆ. ಫೆ.12ರಂದು ತಾಂತ್ರಿಕ ಬಿಡ್ ಹಾಗೂ ನಂತರದಲ್ಲಿ ಅರ್ಹ ಸಂಸ್ಥೆಗಳಿಗೆ ಆರ್ಥಿಕ ಬಿಡ್ ಮಾಹಿತಿ ನೀಡಲಾಗುತ್ತದೆ ಎಂದು ಟೆಂಡರ್ ಷರತ್ತಿನಲ್ಲಿ ತಿಳಿಸಲಾಗಿದೆ.

28.18 ಕಿ.ಮೀ. ಉದ್ದದ ಮಾರ್ಗ:

ಪೂರ್ವ-ಪಶ್ಚಿಮ ಟನಲ್ ಮಾರ್ಗವು 28.18 ಕಿ.ಮೀ. ಉದ್ದವಿರಲಿದೆ. ಕೆ.ಆರ್.ಪುರದಿಂದ ಆರಂಭವಾಗಲಿರುವ ಟನಲ್ ರಸ್ತೆಯು, ಬೈಯಪ್ಪನಹಳ್ಳಿ, ಇಂದಿರಾನಗರ, ಅಶೋಕನಗರ, ಮಾವಳ್ಳಿ, ಜಯನಗರ, ವಿಶ್ವೇಶ್ವರಪುರ, ಮೈಸೂರು ರಸ್ತೆ ಮಾರ್ಗವಾಗಿ ನಾಯಂಡಹಳ್ಳಿಯ ನೈಸ್ ಜಂಕ್ಷನ್ ಬಳಿ ಕೊನೆಗೊಳ್ಳುವಂತೆ ತಾತ್ಕಾಲಿಕ ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ಇದಕ್ಕಾಗಿ 25 ಸಾವಿರ ಕೋಟಿ ರೂ. ವೆಚ್ಚವಾಗುವುದೆಂದು ಅಂದಾಜಿಸಲಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ಆಹ್ವಾನಿಸಿದ್ದ ಉತ್ತರ ದಕ್ಷಿಣ ಟನಲ್ ಯೋಜನೆ ಜಾರಿಗೆ ಹಣಕಾಸು ಹೊಂದಿಸಲು ಖಾಸಗಿ ಆರ್ಥಿಕ ಸಂಸ್ಥೆಗಳಿಂದ ಬಿಡ್ ಆಹ್ವಾನಿಸಲಾಗಿತ್ತು. ಇದನ್ನಾಧರಿ ಮೂರು ಖಾಸಗಿ ಹಣಕಾಸು ಕಂಪನಿಗಲು ತಾತ್ವಿಕ ಒಪ್ಪಿಗೆ ನೀಡಿವೆ. ಈ ಕಂಪನಿಗಳೊಂದಿಗೆ ಪಾಲಿಕೆಯು ಇನ್ನಷ್ಟೇ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.