ಕಾರವಾರ/ಶಿರಸಿ: ಜಿಲ್ಲೆಯ ವಿವಿಧೆಡೆ ಭಾನುವಾರ ಮಧ್ಯಾಹ್ನ ಭೂಮಿ ನಡುಗಿದ ಅನುಭವವಾಗಿದೆ. ದೊಡ್ಡ ಶಬ್ದ ಕೂಡ ಕೇಳಿದ್ದು, ಜನ ಭಯಭೀತರಾಗಿದ್ದಾರೆ.
ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಭಾನುವಾರ ಮಧ್ಯಾಹ್ನ 11 ರಿಂದ 1 ಗಂಟೆಯ ನಡುವಿನ ಅವಧಿಯಲ್ಲಿ ಸುಮಾರು 2 ರಿಂದ 3 ಸೆಕೆಂಟ್ ಅಲ್ಪ ಪ್ರಮಾಣದಲ್ಲಿ ಈ ಅನುಭವ ಉಂಟಾಗಿದ್ದು, ಕೆಲವೆಡೆ ಜನರು ಮನೆಯಿಂದಲೂ ಹೊರ ಬಂದು ನೋಡಿದ್ದಾರೆ. ಶಿರಸಿ ಕುಮಟಾ ರಸ್ತೆಯ ಬಂಡಲ ಗ್ರಾಮ ಪಂಚಾಯಿತಿ ಹಾಗೂ ಜಾನ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಸಾರ್ವನಿಕರಿಗೆ ಈ ಅನುಭವ ಬಂದಿದೆ. ಬಂಡಲ ಪಂಚಾಯಿತಿಯ ಒಂದೆರಡು ಮನೆಗಳಲ್ಲಿ ಮೇಲಿಟ್ಟ ಪಾತ್ರೆಗಳೂ ಸಹ ಕೆಳಕ್ಕೆ ಬಿದ್ದಿವೆ.
ದೇವಿಮನೆ ಘಟ್ಟ ಪ್ರದೇಶದಲ್ಲಿ ಸ್ಥಳೀಯರು ಹೇಳುವಂತೆ 11ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ಒಳಗಿನ ಅವಧಿಯಲ್ಲಿ ಮೂರು ಬಾರಿ ಈ ರೀತಿ ಭೂಮಿ ಅಲುಗಾಟ ನಡೆದಿದೆ. ನಾವು ಭಯಭೀತರಾಗಿ ಮನೆಯಿಂದ ಹೊರಗೋಡಿಬಂದಿದ್ದೇವೆ ಎನ್ನುತ್ತಾರೆ ಇಲ್ಲಿಯ ವ್ಯಾಪಾರಿ ಹರೀಶ ಭಟ್ ಮಂಗಳೂರು.
ಯಲ್ಲಾಪುರ ತಾಲೂಕಿನ ಚವ್ವತ್ತಿ ಭಾಗದಲ್ಲಿ ಈ ಅನುಭವ ಉಂಟಾಗಿದೆ. ಇದೇ ರೀತಿ ಸಿದ್ದಾಪುರ ತಾಲೂಕಿನ ಕೆಲವೆಡೆ ಸಹ ಈ ರೀತಿಯ ಅನುಭವವಾಗಿದೆ. ಇಲ್ಲಿಯ ಕ್ಯಾದಗಿ, ಬೇಡ್ಕಣಿ ಹಾಗೂ ಹಾರ್ಸಿಕಟ್ಟಾ ಭಾಗದಲ್ಲಿಯೂ ಸಾರ್ವಜನಿಕರಿಗೆ ಇದೇ ಅನುಭವವಾಗಿದೆ. ಕೆಲವೆಡೆ ನೆಲದೊಳಗಿಂದ ಶಬ್ದವೂ ಕೇಳಿಬಂದಿದೆ ಎಂಬ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ.
ಯಾವುದೇ ದಾಖಲೆ ಇಲ್ಲ: ಅರ್ತ್‌ಕ್ವೇಕ್‌ಟ್ರಾಕ್ ಡಾಟ್ ಕಾಂ ಎಂಬ ವೆಬ್‌ಸೈಟ್ ಒಂದು ಹಿಂದು ಮಹಾ ಸಾಗರದಲ್ಲಿ ಮಡಗಾಸ್ಕರ್ ದ್ವೀಪದ ಸಮೀಪ ರಿಕ್ಟರ್ ಮಾಪಕದಲ್ಲಿ 5 ರಷ್ಟು ದಾಖಲಿಸಬಹುದಾದ ಕಂಪನ ಉಂಟಾಗಿದೆ ಎಂಬ ಮಾಹಿತಿಯನ್ನು ಹಾಕಲಾಗಿದೆ. ಆದರೆ, ದೇಶ ಹಾಗೂ ಸುತ್ತಲಿನ ಭೂಕಂಪದ ಬಗ್ಗೆ ಅಧಿಕೃತ ಮಾಹಿತಿ ಒದಗಿಸುವ ನ್ಯಾಷನಲ್ ಸೆಂಟರ್ ಾರ್ ಸಿಸ್ಮಾಗ್ರಫಿ ಎಂಬ ವೆಬ್‌ಸೈಟ್‌ನಲ್ಲಿಯೂ ದೇಶದಲ್ಲಿ ಭಾನುವಾರ ಯಾವುದೇ ಭೂಕಂಪವಾದ ಮಾಹಿತಿ ದಾಖಲಾಗಿಲ್ಲ. ಜಿಲ್ಲೆಯಲ್ಲಿ ಯಾವುದೇ ಭೂಕಂಪವಾದ ಮಾಹಿತಿ ದಾಖಲಾಗಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಕೂಡ ವಿಜಯವಾಣಿಗೆ ಸ್ಪಷ್ಟಪಡಿಸಿದ್ದಾರೆ.
ಮಾಹಿತಿ ಕೇಳಿದ್ದೇವೆ: ವಿಜಯವಾಣಿಯೊಂದಿಗೆ ಮಾತನಾಡಿರುವ ಶಿರಸಿ ತಹಸೀಲ್ದಾರ್ ಶ್ರೀಧರ ಮುಂದಲಮನಿ, ತಾಲೂಕಿನ ಬಂಡಲ ಮತ್ತು ದೇವಿಮನೆ ಘಟ್ಟ ಪ್ರದೇಶದ ಜನತೆ ಭೂಮಿ ಕಂಪಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಶಿರಸಿ ಕುಮಟಾ ರಸ್ತೆ ಕಾಮಗಾರಿಯೂ ನಡೆಯುತ್ತಿರುವುದರಿಂದ ಅವರು ಕಲ್ಲು ಬಂಡೆ ಒಡೆಯಲು ಸ್ಪೋಟ ನಡೆಸಿರಬಹುದು ಎಂದೂ ಕೆಲವರು ಮಾಹಿತಿ ನೀಡಿದ್ದರು. ಈ ಕುರಿತಂತೆ ನಮ್ಮ ತಂಡ ವಿಚಾರಿಸಿದ್ದು ಇಂತಹ ಯಾವುದೇ ಸ್ಪೋಟ ನಡೆದಿಲ್ಲ. ಭೂಮಿ ಅಲುಗಾಡಿದ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಸಂಪರ್ಕಿಸಿದ್ದು, ಅವರಿಂದ ಭೂಮಿ ಕಂಪಿಸಿರುವ ಬಗ್ಗೆ ಮಾಹಿತಿ ಲಭಿಸಿಲ್ಲ ಎಂದಿದ್ದಾರೆ.