ಕಾರವಾರ: ಜಿಲ್ಲೆಯ ಶಿರಸಿ ಭಾಗದಲ್ಲಿ ಭಾನುವಾರ ಭೂಕಂಪ (Earthquake) ಆಗಿರುವುದು ಖಚಿತವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸೂಪಾದಲ್ಲಿ ಭೂಕಂಪ ಮಾಪನ ಕೇಂದ್ರವಿದೆ. ಅಲ್ಲಿ ಯಾವುದೇ ಮಾಹಿತಿ ದಾಖಲಾಗಿಲ್ಲ. ಆದರೆ, ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಗ್ರಫಿ ಸಂಸ್ತೆಯ ಗೋವಾ ಮಡಗಾಂವನಲ್ಲಿರುವ ಭೂಕಂಪ ಮಾಪನ ಕೇಂದ್ರದಲ್ಲಿ ಕಂಪನ ದಾಖಲಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಗ್ರಫಿ ಸಂಸ್ತೆಯು ದಾಖಲೆಗಳನ್ನು ಬಿಡುಗಡೆ ಮಾಡಿದೆ.
ಭೂಮಿ ಕಂಪಿಸಿದ ಬಗ್ಗೆ ಹಾಗೂ ಭಾರಿ ಶಬ್ದ ಬಂದ ಬಗ್ಗೆ ಸ್ಥಳೀಯರು ಭಾನುವಾರ ತಮ್ಮ ಅನುಭವ ಹಂಚಿಕೊಂಡಿದ್ದರು. ಆದರೆ, ಜಿಲ್ಲಾಡಳಿತ ಅಂಥ ಯಾವುದೇ ಭೂಕಂಪನ ದಾಖಲಾಗಿಲ್ಲ ಎಂದು ವರದಿ ನೀಡಿತ್ತು.
ಮತ್ತಿಘಟ್ಟ ಸಮೀಪದ ಕುಳಿಗದ್ದೆ ಬೀರಂಜಿ ಎಂಬುದು ಭೂಕಂಪ ಕೇಂದ್ರವಾಗಿದ್ದು, ಭಾನವಾರ ಮಧ್ಯಾಹ್ನ 11.59 ಕ್ಕೆ ರಿಕ್ಟರ್ ಮಾಪಕದಲ್ಲಿ 3.5 ಪ್ರಮಾಣದಲ್ಲಿ ಭೂಮಿ ಕಂಪಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಗ್ರಫಿ ದಾಖಲಿಸಿದೆ. ಭುಮಿಯ ಮೇಲ್ಮೈಯಿಂದ ಸುಮಾರು 5 ಕಿಮೀ ಆಳದಲ್ಲಿ ಕಂಪನ ಉಂಟಾಗಿದೆ. ಅದರ ಪರಿಣಾಮವು ಕೇಂದ್ರದಿಂದ ಸುಮಾರು 300 ಕಿಮೀವರೆಗೂ ಆಗಿದೆ ಎಂದು ದಾಖಲಿಸಲಾಗಿದೆ.
ಇದು ಪಶ್ಚಿಮ ಘಟ್ಟದ ನಟ್ಟ ನಡುವಿನ ಭಾಗವಾಗಿದೆ. ಘಟನೆ ಪಶ್ಚಿಮ ಘಟ್ಟದ ನಿವಾಸಿಗಳ ಎದೆ ನಡುಗಿಸಿದೆ. ಘಟನೆ ನಡೆದ ಸ್ಥಳದಿಂದ 30 ಕಿಮೀ ಅಂತದಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರವಿದೆ. ಕೊಡಸಳ್ಳಿ ಅಣೆಕಟ್ಟೆಯಿದೆ. 10 ಕಿಮೀ ಕಡಿಮೆ ದೂರದಲ್ಲಿ ಅತಿ ಅಪರೂಪದ ಯಾಣದ ಭೈರವೇಶ್ವರ ಶಿಖರಗಳಿವೆ. ಮಾತ್ರವಲ್ಲ ಕುಸಿದು ಬೀಳಬಹುದಾದ ಪಶ್ಚಿಮ ಘಟ್ಟದ ಸೂಕ್ಷ÷್ಮ ವಲಯ ಇದಾಗಿದೆ. ಈ ಹಿಂದೆಯೂ ಈ ವ್ಯಾಪ್ತಿಯ ಮತ್ತಿಘಟ್ಟದಲ್ಲಿ, ಯಲ್ಲಾಪುರ ತಾಲೂಕಿನ ಕಳಚೆ, ಅರಬೈಲ್ ಭಾಗದಲ್ಲಿ ಭೂ ಕುಸಿತ ಉಂಟಾಗಿತ್ತು.